ಕಾಡಾನೆ ಓಡಿಸುವ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು…

290
firstsuddi

ಮಂಡ್ಯ : ಕಾಡಾನೆ ಓಡಿಸುವ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಶಿವನಂಜಯ್ಯ(30) ಮೃತ ಫಾರೆಸ್ಟ್ ವಾಚರ್ ಎಂದು ಗುರುತಿಸಲಾಗಿದೆ. ಶಿಂಷಾ ಅರಣ್ಯ ಪ್ರದೇಶದಲ್ಲಿ ಕೂನನಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದ 10 ಕಾಡಾನೆಗಳ ಗುಂಪನ್ನು ಅರಣ್ಯ ಇಲಾಖೆ ಸಿಬ್ಬಂಧಿಗಳು ಬಂದೂಕಿನ ಶಬ್ದದಿಂದ ಬೆದರಿಸಿ ವಾಪಾಸ್ ಕಾಡಿಗೆ ಓಡಿಸಲು ಮುಂದಾಗಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಜನರ ಕಿರುಚಾಟಕ್ಕೆ ಹೆದರಿದ ಆನೆಗಳು ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದವು. ಇದರಿಂದ ಭಯಗೊಂಡ ಇಲಾಖೆ ಸಿಬ್ಬಂದಿಗಳು ಓಡುವ ವೇಳೆ ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವವರ ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಹಾರಿದ್ದು, ಅದು ಶಿವನಂಜಯ್ಯ ಅವರ ಬೆನ್ನಿಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.