ಆಂಧ್ರಪ್ರದೇಶ : ಆರ್ಟಿಸಿ ಬಸ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಸಂಭವಿಸಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ವಲಯದ ಜಲ್ಲೇರುವಗು ಎಂಬಲ್ಲಿ ಬಸ್ ಕಾಲುವೆಗೆ ಉರುಳಿ ಬಿದ್ದಿದೆ. ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಸ್ ವೇಲೇರುಪಾಡು ಕಡೆಯಿಂದ ಜಂಗಾರೆಡ್ಡಿಗುಡೆಂಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಲಾರಿಗೆ ಬಸ್ ಗುದ್ದುವುದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬಸ್ ನಲ್ಲಿ 47 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.










