ಕಿಚ್ಚ ಸುದೀಪ್ ಅವರು ನಟನೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳ ಮೂಲಕವೂ ಹೆಸರುವಾಸಿ ಆಗಿದ್ದಾರೆ. ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಸದ್ದಿಲ್ಲದೇ, ಕಷ್ಟ ಎಂದುಕೊಂಡು ಬಂದವರಿಗೆ ಸಹಾಯಹಸ್ತ ಚಾಚಿದ್ದಾರೆ. ಅವರ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಮಾಡಿರುವ ಸಹಾಯಗಳು ಎಲ್ಲರ ಕಣ್ಣಮುಂದಿವೆ.
ಅನಾರೋಗ್ಯದಲ್ಲಿ ಇರುವವರಿಗೆ ಆರ್ಥಿಕವಾಗಿ ನೆರವಾಗುವುದು ಮಾತ್ರವಲ್ಲದೇ ಗ್ರಾಮ, ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸುದೀಪ್ ಹೆಸರಿನಲ್ಲಿ ನಡೆದ ಈ ಎಲ್ಲ ಕೆಲಸಗಳಿಗೆ ಇನ್ನೊಂದು ಸೇರ್ಪಡೆ ಆಗುತ್ತಿದೆ. ಕಿಚ್ಚನ ಹೆಸರಿನ ಟ್ರಸ್ಟ್ ಹೊರತಾಗಿ ಅವರ ಅಭಿಮಾನಿಗಳೇ ಸ್ಥಾಪಿಸಿರುವ ‘ಸಂಜೀವಿನಿ ಜೀವ ರಕ್ಷಕ ಟ್ರಸ್ಟ್’ ಮೂಲಕ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದೆ.
‘ಸಂಜೀವಿನಿ ಜೀವ ರಕ್ಷಕ ಟ್ರಸ್ಟ್’ ಈಗಾಗಲೇ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ನೆರವಾಗಿದೆ. ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಈ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಈಗ ಸುದೀಪ್ ನಟಿಸುತ್ತಿರುವ ‘ಮ್ಯಾಕ್ಸ್’ ಸಿನಿಮಾದ ಹೆಸರಿನಲ್ಲೇ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿರುವುದು ವಿಶೇಷ. ಇಂದು ಮಾಕ್ಸ್ ಹೆಸರಿನ ಅಂಬುಲೆನ್ಸ್ ನ್ನು ಸುದೀಪ್ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದ್ದಾರೆ.
‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಅವರು ಒಪ್ಪಿಕೊಂಡ ಸಿನಿಮಾ ‘ಮ್ಯಾಕ್ಸ್’. ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಗ್ಲಿಂಪ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣ ಆಗಿರುವ ಭಾಗಕ್ಕೆ ಎಲ್ಲ ಕಲಾವಿದರು ಧ್ವನಿ ನೀಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.










