ಕಿಯೋನಿಕ್ಸ್ ವೆಂಡರ್ಸ್‍ಗಳ ಬಾಕಿ ಬಿಲ್ ಚುಕ್ತಾ ಮಾಡಿ: ಹೆಚ್.ಡಿ ಕುಮಾರಸ್ವಾಮಿ.

33

ಬೆಂಗಳೂರು: ಉಡಾಫೆ ಮಾತುಗಳನ್ನಾಡುವುದನ್ನು ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್‍ಗಳ ಬಾಕಿ ಬಿಲ್‍ಗಳನ್ನು ಚುಕ್ತಾ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ನಿನ್ನೆ ತರಾಟೆಗೆ ತೆಗೆದುಕೊಂಡರು. ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಮಧ್ಯಸ್ಥಿಕೆ ವಹಿಸುವಂತೆ ಕಿಯೋನಿಕ್ಸ್ ವೆಂಡರ್ಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್‍ಗಳ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಸರ್ಕಾರದ ಆಂತರ್ಯ ಏನೆಂಬುದು ಎಲ್ಲರೂ ತಿಳಿಯ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್‍ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು. ಅವರೇನೂ ಭಿಕ್ಷುಕರಲ್ಲ ಎಂದರು. ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆಂದು ಹೇಳಿದರು. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಲ್ಲರ ಮೇಲೆ ಬೇಕಾಬಿಟ್ಟಿ ಮಾತನಾಡುವ ಖರ್ಗೆ ಅವರು, ನೆಪಗಳನ್ನು ಹೇಳುವುದನ್ನು ಬಿಡಬೇಕು. ಈವರೆಗೆ ಗುತ್ತಿಗೆದಾರರ ಎಲ್‍ಓಸಿಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಚಿವರು ಹಿಂದಿನ ಸರ್ಕಾರದ ಮೇಲೆ ಹೇಳುವ ಬದಲು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಿ ಎಂದು ಹೇಳಿದರು.