ಕುಗ್ರಾಮದಲ್ಲೊಂದು ಆಧುನಿಕರಣಗೊಂಡ ಅತ್ತಿಗೆರೆಯ ಸರ್ಕಾರಿ ಶಾಲೆ

288
  • ಸಂತೋಷ್ ಅತ್ತಿಗೆರೆ

ಕೊಟ್ಟಿಗೆಹಾರ: ಹಳೆವಿದ್ಯಾರ್ಥಿಗಳು ಶಿಕ್ಷಕರು ಮತ್ತು ಎಸ್‍ಡಿಎಂಸಿ ಸಮಿತಿಯವರು ಉತ್ಸಾಹ ತೋರಿ ಕಾರ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆಯೊಂದನ್ನು ಹೇಗೆಲ್ಲಾ ಅಭಿವೃದ್ದಿ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹೌದು ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶೇಷ ಪಠ್ಯೇತರ ಚಟುವಟಿಕೆ, ಹೈಟೆಕ್ ತರಗತಿ, ಡಿಜಿಟಲ್ ಮಾದರಿ ಶಿಕ್ಷಣದ ಮೂಲಕ ಸರ್ಕಾರಿ ಶಾಲೆಗಳಲ್ಲೆ ವಿಶೇಷವೆನಿಸಿದ್ದು ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ.
ಈ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಶಾಲೆಯ ಉತ್ಸಾಹಿ ಶಿಕ್ಷಕರು, ಎಸ್‍ಡಿಎಂಸಿ ಸಮಿತಿ ಹಳೆವಿದ್ಯಾರ್ಥಿಗಳು, ಗ್ರಾಮದ ದಾನಿಗಳು ಹಾಗೂ ಮತ್ತು ಸರ್ಕಾರದ ಕೆಲ ಅನುದಾನಗಳನ್ನು ಬಳಸಿಕೊಂಡು ಶಾಲೆಯನ್ನು ಅಭಿವೃದ್ದಿ ಮಾಡಲಾಗಿದೆ.


ಒಟ್ಟು 101 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು ವಿಶೇಷ ಬಣ್ಣಗಳಿಂದ ಅಲಂಕರಿಸಿದ ಗೋಡೆಗಳು, ಆಕರ್ಷಕ ಮೇಲ್ಚಾವಣಿ ಮತ್ತು ಎಲ್‍ಇಡಿ ಬಲ್ಪ್‍ಗಳ ಬೆಳಕು ಹಾಗೂ ಡಿಜಿಟಲ್ ಬೋರ್ಡ್‍ಗಳು ವಿದ್ಯಾರ್ಥಿಗಳ ಕಲಿಕೆಗೆ ಉತ್ತಮವಾಗಿದೆ. ಟಚ್‍ಸ್ಕ್ರೀನ್ ಹೊಂದಿರುವ ಡಿಜಿಟಲ್ ಬೋರ್ಡ್‍ನ ಮೂಲಕ ವೀಡಿಯೋ ಮತ್ತು ಪೋಟೊಗಳನ್ನು ಬಳಸಿ ಮಕ್ಕಳಿಗೆ ಮನಮುಟ್ಟುವಂತೆ ಕಲಿಸಲಾಗುತ್ತಿದೆ. ಶಾಲೆಯ ಮುಂಭಾಗದಲ್ಲಿ ಡಿಜಿಟಲ್ ಲೈಟಿಂಗ್ ನಾಮಫಲಕ ಹಾಕಲಾಗಿದೆ. ಮೇಲ್ದರ್ಜೆಗೇರಿಸಿದ ವಿಶೇಷ ಕೊಠಡಿಗಳಲ್ಲಿ ಈ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತಿದ್ದು ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಯೋಗಾಸನ, ನೈತಿಕ ಶಿಕ್ಷಣದ ಪಾಠಗಳನ್ನು ಹೇಳಿಕೊಡಲಾಗುತ್ತಿದೆ. ಶಾಲೆಯ ವಿದ್ಯಾರ್ಥಿಗಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ ನಾಲ್ಕು ಬಣ್ಣದ ಸಮವಸ್ತ್ರಗಳನ್ನು ನೀಡಲಾಗಿದ್ದು ಆ ನಾಲ್ಕು ತಂಡಗಳಿಗೆ ಪ್ಲೆ ಮಾಡಲಿಂಗ್, ಪೇಪರ್ ಕಟ್ಟಿಂಗ್‍ನಂತಹ ಗುಂಪು ಚಟುವಟಿಕೆಗಳನ್ನು ನೀಡಿ ವಾರಾಂತ್ಯದಲ್ಲಿ ಚಟುವಟಿಕೆಗಳ ಮೌಲ್ಯಮಾಫನವನ್ನು ಮಾಡಿಕೊಂಡು ಬರಲಾಗುತ್ತಿದ್ದೆ. ದಿನದ ಒಂದು ತರಗತಿಯನ್ನು ಅದಕ್ಕೆಂದೆ ಮೀಸಲಿಟ್ಟು ಆ ವೇಳೆಯಲ್ಲಿ ಪಾಠ ಅಥವಾ ಕಥೆ ಆಲಿಸುವಿಕೆ, ಬರವಣಿಗೆ, ಅಬಾಕಸ್ ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ.
ಶಾಲೆ ಪ್ರವೇಶದ್ವಾರದಲ್ಲಿ ಚಪ್ಪರವನ್ನು ನಿರ್ಮಿಸಲಾಗಿದ್ದು ಚಪ್ಪರದ ಮೇಲೆ ಹೂವಿನ ಬಳ್ಳಿಗಳನ್ನು ಹಬ್ಬಿಸಲಾಗಿದೆ. ಇದು ಶಾಲೆಗೆ ಪ್ರವೇಶಿಸುವವರಿಗೆ ಆಹ್ಲಾದಕರ ಅನುಭವ ನೀಡುತ್ತದೆ. ಶಾಲೆಯ ಕಾಂಪೌಂಡಿನ ಹೊರಭಾಗದಲ್ಲಿ ಅಶೋಕ ಗಿಡಗಳನ್ನು ನೆಡಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಗಳ ಆಕರ್ಷಕ ಉದ್ಯಾನ ನಿರ್ಮಿಸಲಾಗಿದ್ದು ಉದ್ಯಾನದ ನಡುವೆ ನೀರಿನ ಕಾರಂಜಿ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದೆ.
ಶಾಲೆಯ ಕೊಠಡಿಗಳಿಗೆ ವಿವೇಕಾನಂದ, ಅಂಬೇಡ್ಕರ್, ಅಬ್ದುಲ್ ಕಲಾಂ, ಕಲ್ಪನಾ ಚಾವ್ಲಾ ಎಂದು ಹೆಸರಿಡಲಾಗಿದ್ದು ತರಗತಿ ಒಳಗೋಡೆಗಳ ಮೇಲೆ ಆ ನಾಯಕರ ಸಂಪೂರ್ಣ ಮಾಹಿತಿಗಳನ್ನು ಹಾಕಲಾಗಿದೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಗಿಡ ಮತ್ತು ಹೂಕುಂಡಗಳನ್ನು ಶಾಲೆಗೆ ನೀಡುವ ಸಂಪ್ರದಾಯವನ್ನು ಬೆಳೆಸಲಾಗಿದ್ದು ಜನ್ಮದಿನದಂದು ಉಡುಗೊರೆಗಳನ್ನು ಕೊಡುವ ಬದಲು ಒಂದು ಗಿಡವನ್ನು ನೀಡುವ ಪರಿಪಾಟವನ್ನು ಈ ಶಾಲೆಯಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ.
ಕಳೆದ ವರ್ಷ ಈ ಶಾಲೆಯಲ್ಲಿ 89 ವಿದ್ಯಾರ್ಥಿಗಳಿದ್ದು ಈ ವರ್ಷ 101ಕ್ಕೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಎನ್ನುವ ಬದಲು ಎಲ್ಲಾ ಶಾಲೆಗಳಲ್ಲೂ ಅಭಿವೃದ್ದಿ ಪಡಿಸಿದರೆ ವಿದ್ಯಾರ್ಥಿಗಳು ಬಂದೆ ಬರುತ್ತಾರೆ ಎನ್ನುವುದಕ್ಕೆ ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ.


ಮುಖ್ಯ ಶಿಕ್ಷಕ ರಾಜು, ಸಹಶಿಕ್ಷಕರಾದ ಕುಮಾರ್, ಮೈಮುನಾಬಿ, ಕವಿತಾ, ಹಂಸಲೇಖಾ, ಅವರ ಉತ್ಸಾಹ ಮತ್ತು ಶ್ರಮದ ಫಲವಾಗಿ ಮತ್ತು ಎಸ್‍ಡಿಎಂಸಿ ಸಮಿತಿ, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಾಯದಿಂದ ಶಲೆಯ ಅಭಿವೃದ್ದಿ ಸಾಧ್ಯವಾಗಿದೆ.

ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡುತ್ತಿದ್ದು ಉತ್ಸಾಹಿ ಶಿಕ್ಷಕ ವರ್ಗ ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಅಭಿವೃದ್ದಿ ಮಾಡಲು ಸಾಧ್ಯವಾಗಿದೆ’
                                                                                                   -ಕಾಂತರಾಜು ಎಸ್‍ಡಿಎಂಸಿ ಅಧ್ಯಕ್ಷ

ಶಾಲೆಯಲ್ಲಿ ವರ್ಷದಿಂದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೆ ಹಳೆವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗದ ಶ್ರಮವೇ ಕಾರಣ. ಶಾಲೆಯ ಅಭಿವೃದ್ದಿಯ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳಿಸಲು ಮುಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಯನ್ನು ಎಲ್ಲರ ಸಹಕಾರದೊಂದಿಗೆ ಮತ್ತಷ್ಟು ಅಭಿವೃದ್ದಿ ಮಾಡುವ ಉದ್ದೇಶವಿದೆ.’
                                                                                                          -ರಾಜು, ಮುಖ್ಯಶಿಕ್ಷಕರು