ಮೈಸೂರು : ಹುಣಸೂರು ಉಪಚುನಾವಣೆಯಲ್ಲಿ ಹೆಚ್. ವಿಶ್ವನಾಥ್ ಅವರ ಸೋಲಿಗೆ ಸಿ.ಪಿ ಯೋಗೇಶ್ವರ್ ಕಾರಣ ಎಂದು ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆಗೂ ಮುನ್ನವೇ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರವನ್ನು ಉಳಿಸುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಮತದಾರರು ಜೆಡಿಎಸ್ ಪಕ್ಷವನ್ನು ಶೂನ್ಯ ಮಾಡಿ ಸರ್ಕಾರವನ್ನು ಭದ್ರಪಡಿಸಿದ್ದಾರೆ ಇದರಲ್ಲಿ ತಪ್ಪೇನಿದೆ. ಮತದಾರರು ಕುಮಾರಸ್ವಾಮಿ ಅವರ ಮಾತಿನಂತೆ ನಡೆದುಕೊಂಡಿದ್ದಾರೆಎಂದು ಹೇಳುವ ಮೂಲಕ ಹೆಚ್. ಕುಮಾರಸ್ವಾಮಿ ಅವರ ಕಾಲೆಳೆದಿದ್ದಾರೆ. ಕುಮಾರಣ್ಣ ಮುತ್ತಿನಂತೆ ಮಾತನ್ನಾಡುತ್ತಾರೆ ಎಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಇತ್ತೀಚೆಗೆ ಅವರ ಮಾತುಗಳ ಅಭಿಮಾನಿಗಳನ್ನೇ ಕೆರಳಿಸಿದೆ. ಕುಮಾರಸ್ವಾಮಿ ಅವರ ನಡೆಯೇ ಬೇರೆ, ನುಡಿಯೇ ಬೇರೆ ಆಗಿದೆ. ಇನ್ನಾದರೂ ಅವರು ಬದಲಾಗಬೇಕು ಎಂದರು.
ಇದೇ ವೇಳೆ ಹುಣಸೂರು ಉಪಚುನಾವಣೆಯಲ್ಲಿ ತನ್ನ ಸೋಲಿಗೆ ಜಿ.ಟಿ. ದೇವೇಗೌಡ ಅವರು ಕಾರಣ ಎಂದು ಹೇಳಿದ್ದ ಹೆಚ್. ವಿಶ್ವನಾಥ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ್ದು, ಹುಣಸೂರು ಉಪಚುನಾವಣೆಯಲ್ಲಿ ಹೆಚ್. ವಿಶ್ವನಾಥ್ ಅವರ ಸೋಲಿಗೆ ಸಿ.ಪಿ. ಯೋಗೇಶ್ವರ್ ಕಾರಣ. ಯೋಗೇಶ್ವರ್ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ಅವರ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ದೇವೇಗೌಡ, ಕುಮಾರಸ್ವಾಮಿ. ಈ.ಟಿ. ದೇವೇಗೌಡ ಅಂತೆಲ್ಲಾ ಮಾತನಾಡಿದರು. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಅವರಲ್ಲಿ ಇತ್ತು. ಹೀಗಾಗಿ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.










