ಚಿಕ್ಕಮಗಳೂರು : ದತ್ತನಿಗೆ ಮಡಿ ಹಾಗೂ ಜಾತಿ-ಭೇದ ಇಲ್ಲದಿದ್ದಾಗ ಅರ್ಚಕರಲ್ಲಿ ಮಡಿ-ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ : ಸಚಿವ ಸಿ.ಟಿ. ರವಿ

508

ಚಿಕ್ಕಮಗಳೂರು : ಬಹಳ ವರ್ಷಗಳ ಪರಿಶ್ರಮ-ಸಂಕಲ್ಪ, ಭಕ್ತಿ-ಶಕ್ತಿಯ ಆಂದೋಲನ ಅಯೋಧ್ಯ ಮಾದರಿಯಲ್ಲಿ ಗುರಿಮುಟ್ಟುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ಹಾಗೂ ತತ್ವಬದ್ಧವಾದ ಹೋರಾಟವಾಗಿದ್ದು, ದತ್ತಪೀಠದ ತೀರ್ಪು ನಮ್ಮಂತೆಯೇ ಬರುತ್ತದೆ ಎಂದು ದತ್ತಾಮಾಲಧಾರಿ ಹಾಗೂ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.
ಇಂದು ನಗರದ ನಾರಾಯಣಪುರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, ಜೆಡಿಎಸ್ ದಲಿತ ಅರ್ಚಕರನ್ನು ನೇಮಕ ಮಾಡಲಿ ಎಂಬ ಆಗ್ರಹಕ್ಕೆ ದತ್ತನಿಗೆ ಮಡಿ ಹಾಗೂ ಜಾತಿ-ಭೇದ ಇಲ್ಲದಿದ್ದಾಗ ಅರ್ಚಕರಲ್ಲಿ ಮಡಿ-ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ಯಾರೇ ಅರ್ಚಕರಾದರೂ ಸರಿ. ಹಿಂದೂ ಅರ್ಚಕರು ನೇಮಕವಾಗಿ ಹಿಂದೂ ಪದ್ಧತಿ ಪ್ರಕಾರ ಪೂಜೆ ಆಗಬೇಕು ಅನ್ನುವುದಷ್ಟೇ ನಮ್ಮ ಬೇಡಿಕೆ. ದಲಿತ ಅಥವಾ ವೇದಾ-ಆಗಮನ ಕಲಿತ ಯಾರೇ ಅರ್ಚಕರಾದರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ನಾನು ಇತ್ತೀಚಿಗೆ ಎರಡು ಹೇಳಿಕೆಗಳನ್ನು ಗಮನಿಸಿದ್ದೇನೆ. ಜೆಡಿಎಸ್ ಮುಖಂಡರಾದ ಹೆಚ್.ಹೆಚ್. ದೇವರಾಜು ಅವರು ಅರ್ಚಕರ ನೇಮಕಾತಿಗೆ ಸಹಮತ ವ್ಯಕ್ತಪಡಿಸಿ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದನ್ನು ನಾನು ಸ್ವಾಗತಿಸುತ್ತೇನೆ. ಕಡೆಗೂ ಜೆಡಿಎಸ್ ತನ್ನ ನಿಲುವನ್ನು ಬದಲಾಯಿಕೊಂಡು ಅರ್ಚಕರ ನೇಮಕಕ್ಕೆ ಒತ್ತಾಸೆಯಾಗಿ ನಿಂತಿರುವ ಬಹುಕಾಲದ ದತ್ತಪೀಠ ಮುಕ್ತಿಯ ಹೋರಾಟಕ್ಕೆ ತಾವು ಬೆಂಬಲಿಸುವ ರೀತಿಯಲ್ಲಿ ಮಾತನಾಡಿದವರನ್ನು ನಾನು ಅಭಿನಂದಿಸುತ್ತೇನೆ ಹಾಗು ಸ್ವಾಗತಿಸುತ್ತೇನೆ ಎಂದರು. ಸಚಿವ ಸಿ.ಟಿ. ರವಿ ದತ್ತಪೀಠದ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಸಿ.ಟಿ. ರವಿ ದತ್ತಪೀಠ ಮುಕ್ತಿಯ ಆಂದೋಲನಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಾಗ ನಾನು ಯಾವುದೇ ಪಕ್ಷದ ಸದಸ್ಯನೂ ಆಗಿರಲಿಲ್ಲ ಎಂದು ಆರೋಪಿತರಿಗೆ ತಿರುಗೇಟು ನೀಡಿದ್ದಾರೆ.