ಕುರುಡನ ಪಾತ್ರದಲ್ಲಿ ತೆರೆ ಮೇಲೆ ಬರಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್..!

153
Firstsuddi

ಬೆಂಗಳೂರು : ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಸಿನಿಮಾದಲ್ಲಿ ಗಣೇಶ್ ಅವರು ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನ ಸ್ವತಃ ಗಣೇಶ್ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಕಟಕಟೆಯಲ್ಲಿ ಅಂಧನಂತೆ ನಿಂತಿರುವ ಫೋಟೋವನ್ನ ಹಂಚಿಕೊಳ್ಳುವ ಮೂಲಕ, ಸಖತ್ ಸಿನಿಮಾದಲ್ಲಿ ಗಣೇಶ್ ಯಾವ ರೀತಿ ಪಾತ್ರ ಎಂಬುದರ ಸುಳಿವು ಕೊಟ್ಟಿದ್ದಾರೆ. ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನ್ನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಣುಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಬರೆದುಕೊಂಡು ಗಣೇಶ್ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಗಣೇಶ್, ತಾನು ಅಭಿನಯಿಸುತ್ತಿರುವ ಹೊಸ ಸಿನಿಮಾ ಕುರಿತಾಗಿ ಅಭಿಮಾನಿಗಳಿಗೆ ಗುಟ್ಟನ್ನ ಬಿಟ್ಟು ಕೊಟ್ಟಿದ್ದಾರೆ.

ಸಖತ್ ಸಿನಿಮಾದಲ್ಲಿ ಗಣೇಶ್ ಅವರು ಈ ರೀತಿಯ ಪಾತ್ರ ಮಾಡುತ್ತಿದ್ದು, ನಿಶ್ಚಿಕ್ ನಾಯ್ಡು ಗಣೇಶ್ ಜೊತೆ ಜೋಡಿಯಾಗಿದ್ದಾರೆ. ಚಮಕ್ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿ ಹಾಗೂ ಗಣೇಶ್ ಕಾಂಬಿನೇಶನಲ್ಲಿ ಈ ಸಿನಿಮಾ ತೆರೆ ಮೇಲೆ ಬರಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.