ಚಿಕ್ಕಮಗಳೂರು : ದೇಶದಲ್ಲಿ ಕೃಷಿ ಕ್ಷೇತ್ರ ಮತ್ತು ಪ್ರಕೃತಿ ಉಳಿಯಬೇಕಾದರೆ ರೈತ ಸಮುದಾಯ ಮತ್ತೆ ಪಾರಂಪರಿಕ ನೈಸರ್ಗಿಕ ಕೃಷಿಯತ್ತ ಹೊರಳಬೇಕು ಎಂದು ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಣಾಪುರ ಸಲಹೆ ನೀಡಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ನಿನ್ನೆ ಏರ್ಪಡಿಸಿದ್ದ ಹೈಟೆಕ್ ಶುದ್ದ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ನಿಸರ್ಗದತ್ತವಾದ ನೈಸರ್ಗಿಕ ಕೃಷಿ ಪದ್ದತಿ ಇತ್ತು, ಅದರಿಂದಾಗಿ ಅಂದು ಕೃಷಿ ಕ್ಷೇತ್ರ ಸಮೃದ್ದವಾಗಿತ್ತು ಆ ಕಾಲದಲ್ಲಿ ದೇಶದಲ್ಲಿ 12 ಲಕ್ಷ ವಿವಿಧ ಗೋವುಗಳ ತಳಿ ಇದ್ದವು. ಕೃಷಿ ಭೂಮಿ ಜೀವಾಣುಗಳಿಂದ ತುಂಬಿತ್ತು ಎಂದರು.
ಆದರೆ ಸ್ವಾತಂತ್ರ್ಯಾ ನಂತರ ಜಾರಿಗೆ ತಂದ ಕ್ಷೀರ ಕ್ರಾಂತಿ ಮತ್ತು ಹಸಿರು ಕ್ರಾಂತಿಯಿಂದಾಗಿ ರಾಸಾಯನಿಕ ಬಳಕೆಯ ಪರಿಣಾಮ ದೇಶದ ಕೃಷಿ ಭೂಮಿಯಲ್ಲಿ ಫಲವತ್ತತೆಗೆ ಅತ್ಯಗತ್ಯವಾದ ಜೀವಾಣುಗಳು ನಾಶವಾದವು, ಶೇ.87 ರಷ್ಟಿದ್ದ ಕೃಷಿ ಭೂಮಿ ಇಂದು ಶೇ.40 ಕ್ಕೆ ಇಳಿದಿದೆ. 12 ಲಕ್ಷದಷ್ಟಿದ್ದ ಗೋ ತಳಿಗಳಲ್ಲಿ ಇಂದು ಕೇವಲ 37 ತಳಿಗಳು ಮಾತ್ರ ಉಳಿದಿವೆ ಎಂದು ವಿಷಾದಿಸಿದರು.
ರಾಸಾಯನಿಕ ಕೃಷಿಯಿಂದ ಕೃಷಿ ಕ್ಷೇತ್ರಕ್ಕೆ ಮತ್ತು ರೈತರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ ಅವರು 10 ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಕೃಷಿ ಕ್ಷೇತ್ರ ಉಳಿಯಬೇಕಾದರೆ ನೈಸರ್ಗಿಕ ಕೃಷಿಯನ್ನು ಮತ್ತೆ ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್ ಸಂಸ್ಥೆಗೆ ಹೈಟೆಕ್ ಕುಡಿಯುವ ನೀರಿನ ಘಟಕ ಮತ್ತು 10 ಕಂಪ್ಯೂಟರ್‍ಗಳನ್ನು ಕೊಡುಗೆಯಾಗಿ ನೀಡಿದ ದಾನಿ ಸಿ.ಎಂ.ಸುಮಂತ್ ಅವರಿಗೆ ಧನ್ಯವಾದ ಅರ್ಪಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಸಂಸ್ಥೆಯ ಬೆಳವಣಿಗೆಗೆ ಶಿಕ್ಷಕರು ಮತ್ತು ಉಪನ್ಯಾಸಕರು ಮೂಲ ಕಾರಣ ಎಂದು ತಿಳಿಸಿದರು.
ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂಧಿಗಳು ಮತ್ತು ಅಲ್ಪಾವಧಿ ಸೇವೆ ಸಲ್ಲಿಸಿ ನಿರ್ಗಮಿಸಿದವರನ್ನು ಹಾಗೂ ದಾನಿ ಸಿ.ಎಂ.ಸುಮಂತ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 25 ವರ್ಷ ಸೇವೆ ಪೂರೈಸಿದವರನ್ನು ಗೌರವಿಸಲಾಯಿತು.
ಮಲೆನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್, ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕನಕರಾಜ್, ಜಯಶ್ರೀ ಜೋಶಿ, ಬಿ.ಜಿ.ಚಂದ್ರಶೇಖರ್, ಕಛೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮೀ ಆಯ್ಕೆ ಶ್ರೇಣಿ ಉಪನ್ಯಾಸಕ ಕೆ.ಎನ್.ಮಂಜುನಾಥ ಭಟ್, ಎನ್.ರೂಪಾ ಉಪಸ್ಥಿತರಿದ್ದರು.










