ಕೆಟ್ಟು ನಿಂತ ಆಂಬ್ಯುಲೆನ್ಸ್ – 2 ಗಂಟೆ ಕಾಲ ನಡು ರಸ್ತೆಯಲ್ಲೇ ಗರ್ಭಿಣಿ ನರಳಾಟ…

70
firstsuddi

ಚಿಕ್ಕಮಗಳೂರು : ಸರ್ಕಾರಿ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಗರ್ಭಿಣಿ ಮಹಿಳೆ ಎರಡು ಗಂಟೆಗಳ ಕಾಲ ನಡು ರಸ್ತೆಯಲ್ಲೇ ನರಳಾಡಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾಳೆಹೊನ್ನೂರು ಸಮೀಪದ ಮಾಗುಂಡಿಯ 26 ವರ್ಷದ ಶರಣ್ಯ ಎನ್ನುವ ಮಹಿಳೆಯನ್ನು ಹೆರಿಗೆಗೆಂದು ಕೊಪ್ಪದ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ನಿನ್ನೆ ಮಧ್ಯಾಹ್ನ ಕರೆದೊಯ್ಯಲಾಗುತ್ತಿತ್ತು. ಕಳಸ ಟು ಬಾಳೆಹೊನ್ನೂರು ಸಮೀಪದ ಹಳುವಳ್ಳಿ ಬಳಿ ಗುಂಡಿಬಿದ್ದ ರಸ್ತೆಯಲ್ಲಿ ಇಳಿದ ಆಂಬ್ಯುಲೆನ್ಸ್ ಮೇಲಕ್ಕೆ ಹತ್ತಿಲ್ಲ. ಗುಂಡಿಗೆ ಇಳಿದ ರಭಸಕ್ಕೆ ವಾಹನದ ಆಕ್ಸೆಲ್ ರಾಡ್ ತುಂಡಾಗಿದೆ. ದುರಸ್ತಿಗಾಗಿ ಆಂಬ್ಯುಲೆನ್ಸ್ ಅನ್ನು ಕಳಸಕ್ಕೆ ಎಳೆದು ತಂದು ತಕ್ಕ ಮಟ್ಟಿಗೆ ರಿಪೇರಿ ಮಾಡಿಸಿಕೊಂಡು ಮತ್ತೆ ಪ್ರಯಾಣ ಆರಂಭಿಸುವಷ್ಟರಲ್ಲಿ ಒಂದು ಗಂಟೆ ಕಳೆದಿದೆ.

ರಿಪೇರಿಯಾದ ವಾಹನ ಸ್ವಲ್ಪ ದೂರ ಸಾಗುತ್ತಿದ್ದಂತೆ ಕಳಸದಲ್ಲೇ ಮತ್ತೆ ಕೆಟ್ಟುನಿಂತಿದೆ. ಕೊನೆಗೆ ಗರ್ಭಿಣಿಯನ್ನು ಬಾಳೆಹೊನ್ನೂರಿನಲ್ಲಿ ಮತ್ತೊಂದು ಆಂಬ್ಯುಲೆನ್ಸ್  ಕರೆಸಿ ಕೊಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ಮಹಿಳೆ ಕೊಪ್ಪ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ.

ಜೀವ ಉಳಿಸುವ ಆಂಬ್ಯುಲೆನ್ಸ್ ಗಳೇ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಜನಸಾಮಾನ್ಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.