ಕೇಂದ್ರ ಸಚಿವ ಅಶ್ವಿನಿ ಚೌಬೆ ಸಹೋದರ ಆಸ್ಪತ್ರೆಯಲ್ಲಿ ನಿಧನ – ವೈದ್ಯರ ನಿರ್ಲಕ್ಷ್ಯ ಆರೋಪ…

47
firstsuddi

ಬಿಹಾರ : ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಸಹೋದರ ನಿರ್ಮಲ್ ಚೌಬೆ ಬಿಹಾರದ ಭಾಗಲ್ಪುರ್ ನ ಮಾಯಾಗಂಜ್ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದಾರೆ.

ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಇಲ್ಲಿನ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತುರ್ತು ಚಿಕಿತ್ಸೆ ಘಟಕ(ಐಸಿಯು)ದಲ್ಲಿ ವೈದ್ಯರು ಇರದೇ ಇರುವ ಕಾರಣ ಸೂಕ್ತ ಚಿಕಿತ್ಸೆ ದೊರೆಯದೇ ನಿರ್ಮಲ್ ಚೌಬೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ.

ನಿರ್ಮಲ್ ಚೌಬೆ ಅವರ ಆರೋಗ್ಯ ನಿನ್ನೆ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ರಕ್ತದೊತ್ತಡ ಹೆಚ್ಚಾಗಿ, ಉಸಿರಾಡಲು ತೊಂದರೆಯಾಗಿತ್ತು. ಕೂಡಲೇ ಅವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ಸಾಗಿಸುವಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ನೇರವಾಗಿ ಐಸಿಯುಗೆ ದಾಖಲಿಸಲಾಯಿತು. ಆದರೆ ಐಸಿಯು ವಾರ್ಡ್‍ನಲ್ಲಿ ಯಾವುದೇ ಹಿರಿಯ ವೈದ್ಯರು ಇರಲಿಲ್ಲ. ಆಗ ನರ್ಸ್‍ಗಳೇ ಅವರಿಗೆ ಚಿಕಿತ್ಸೆ ನೀಡಿದರು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.

ಈ ಕುರಿತು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಅಸೀಂಕುಮಾರ್ ಪ್ರತಿಕ್ರಿಯಿಸಿದ್ದು, ನಿರ್ಮಲ್ ಚೌಬೆ ಅವರನ್ನು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆತರಲಾಗಿತ್ತು. ಈ ವೇಳೆ ಅವರಿಗೆ ಭಾರೀ ಹೃದಯಾಘಾತವಾಗಿರುವುದನ್ನು ಅರಿತು ಆಸ್ಪತ್ರೆಯಲ್ಲಿನ ಇತರ ಹಿರಿಯ ವೈದ್ಯರು ಔಷಧಗಳನ್ನು ನೀಡಿ ಐಸಿಯು ವಾರ್ಡ್‍ಗೆ ಸ್ಥಳಾಂತರಿಸಿದ್ದಾರೆ. ಆದರೆ ಅಲ್ಲಿ ಯಾವ ವೈದ್ಯರೂ ಇರಲಿಲ್ಲ. ಆಸ್ಪತ್ರೆಯ ಕರ್ತವ್ಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ವೈದ್ಯರಾದ ಆದಿತ್ಯ ಮತ್ತು ವಿನಯ್ ಕುಮಾರ್‍ನನ್ನು ಅಮಾನತುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತ ಭಾಗಲ್ಪುರ್ ಸಿಟಿ ಡಿಎಸ್ ಪಿ ಅಜಯ್ ಕುಮಾರ್ ಚೌಧರ್ ಪ್ರತಿಕ್ರಿಯಿಸಿ, ಯಾರಾದರೂ ದೂರು ಕೊಟ್ಟರೆ ನಾವು ತನಿಖೆ ನಡೆಸುತ್ತೇವೆ. ಸಾವಿಗೆ ಕಾರಣವಾಗುವಂತೆ ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.