ಕೇಳಿಬಂತು ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಘೋಷಣೆ.

37

ಶೃಂಗೇರಿ: ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಈ ಘೋಷಣೆ ಕೇಳಿಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಮೆಣಸೆ ಹೆಲಿಪ್ಯಾಡ್‍ನಲ್ಲಿ. ಡಿಸಿಎಂ ಡಿ.ಕೆ ಶಿವಕುಮಾರ್ ಶನಿವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದು, ಮೆಣಸೆ ಹೆಲಿಪ್ಯಾಡ್‍ಗೆ ಆಗಮನಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಅವರ ಪರ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜಕೀಯದಲ್ಲಿ ಯಾವುದೇ ತಿರುವು ಇಲ್ಲ. ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಜನರು ಅಧಿಕಾರ ನೀಡಿದ್ದಾರೆ, ಐದು ವರ್ಷ ನಮ್ಮ ಸರ್ಕಾರವೇ ಇರಲಿದೆ. ನಮ್ಮ ಸರ್ಕಾರ ಜನರ ಪರವಾಗಿ ಕೆಲಸ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ನಾವೆಲ್ಲರೂ ಕೆಲಸ ಮಾಡುತ್ತೇವೆ. ನನಗೆ ಯಾರ ಬೆಂಬಲವೂ ಬೇಡ, ಯಾರ ಘೋಷಣೆಯೂ ಬೇಡ. ಪಕ್ಷಕ್ಕಾಗಿ ನಾನು ಕೆಲಸ ಮಾಡುತ್ತೇನೆ. ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿರುವ ವಿಷಯ ಎಂದು ಹೇಳಿದರು. ಯಾರು ಧರ್ಮವನ್ನು ಕಾಯುತ್ತಾರೋ ಅವರನ್ನು ಧರ್ಮ ಕಾಯುತ್ತದೆ. ಶ್ರೀಗಳು ಜವಾಬ್ದಾರಿ ವಹಿಸಿಕೊಂಡು ಐವತ್ತು ವರ್ಷಗಳು ಪೂರೈಸಿದ್ದಾರೆ. ಯಾವುದೇ ರಾಜಕೀಯಕ್ಕೆ ಹೋಗದೆ ಶ್ರೀಗಳು ಧರ್ಮ ಉಳಿಸಿದ್ದಾರೆ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು, ನಾನು ಪೂಜೆಯನ್ನು ಮಾಡುತ್ತೇನೆ. ಶೃಂಗೇರಿ ಶಾರದಾ ಪೀಠದ ಮೇಲೆ ನನಗೆ ವಿಶೇಷವಾದ ನಂಬಿಕೆ ಇದೆ. ನಾನು ಸರ್ಕಾರದ ಪರ ಹಾಗೂ ವೈಯಕ್ತಿಕವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.