ಕೊನೆಗೂ ಬದುಕುಳಿಯಲಿಲ್ಲ ಉನ್ನಾವೋ ಅತ್ಯಾಚಾರ ಸಂತ್ರಸ್ತೆ…!

187
firstsuddi

ಲಕ್ನೋ : ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 2018ರಲ್ಲಿ ಸಂತ್ರಸ್ಥ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಯುವತಿ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕಳೆದ ನ.30ರಂದು ಪ್ರಕರಣದ ಪ್ರಮುಖ ಆರೋಪಿ ಶುಭಂ ತ್ರಿವೇದಿ ಎಂಬುವವರಿಗೆ ಕೋರ್ಟ್ ಜಾಮೀನು ನೀಡಿತ್ತು. ಸಂತ್ರಸ್ತೆ ಯುವತಿ ಡಿ.5ರಂದು ತನ್ನ ಮೇಲಾಗಿದ್ದ ಸಾಮೂಹಿಕ ಅತ್ಯಾಚಾರದ ವಿರುದ್ಧ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಜಾಮೀನಿನ ಮೇಲೆ ಹೊರಬಂದಿದ್ದ ಇಬ್ಬರು ಆರೋಪಿಗಳು ಸೇರಿ ಐದು ಮಂದಿ ಸಂತ್ರಸ್ತೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಶೇ.90ರಷ್ಟು ಸುಟ್ಟು ಗಾಯಗಳಾಗಿದ್ದ 23 ವರ್ಷದ ಸಂತ್ರಸ್ತೆಯನ್ನು ಉತ್ತರಪ್ರದೇಶದ ಲಖನೌನಿಂದ ದೆಹಲಿಗೆ ಕರೆತಂದು ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಸಂತ್ರಸ್ತೆ ಬದುಕುವುದಿಲ್ಲ ಎಂದು ಹೇಳಿದ್ದರು. ಬಳಿಕ ಸಂತ್ರಸ್ತೆ ಸಾಯುವ ಮುನ್ನ ತನ್ನ ಸಹೋದರನ ಬಳಿ “ನನಗೆ ಸಾಯಲು ಇಷ್ಟವಿಲ್ಲ. ನನ್ನನ್ನು ಈ ಸ್ಥಿತಿಗೆ ತಂದವರಿಗೆ ಕಠಿಣ ಶಿಕ್ಷೆ ಆಗಬೇಕು. ಅವರು ಸಾಯುವುದನ್ನು ನಾನು ನೋಡಬೇಕು ಎಂದು ಹೇಳಿಕೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 11;40ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.