ಮಂಡ್ಯ : ಕೊರೊನಾ ವೈರಸ್ ಟೆಸ್ಟ್ ನಡೆಸದಂತೆ ಜೆಡಿಎಸ್ ವಿಧಾನಸಭಾ ಸದಸ್ಯ ಗಲಾಟೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರಿಗೆ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಅಂಬೇಡ್ಕರ್ ಭವನದ ಬಳಿ ವಿಧಾನಸಭಾ ಸದಸ್ಯ ಶ್ರೀಕಂಠೇಗೌಡ ಅವರ ಮನೆಯಿದ್ದು, ಹೀಗಾಗಿ ಇಲ್ಲಿ ಕೊರೊನಾ ಪರೀಕ್ಷೆ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಗಲಾಟೆ ನಡೆಸಿದ್ದಾರೆ. ಅಲ್ಲದೇ ಈ ವೇಳೆ ಶ್ರೀಕಂಠೇಗೌಡ ಅವರ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ಹಿನ್ನೆಲೆ ಪುತ್ರ ಕೃಷಿಕ್ನನ್ನು ಪೊಲೀಸರು ಬಂಧಿಸಿದ್ದು, ವಿಧಾನಸಭಾ ಸದಸ್ಯ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ಮೇಲೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143(ಅಕ್ರಮ ಗುಂಪು), 147(ದೊಂಬಿ), 341(ಅಕ್ರಮವಾಗಿ ತಡೆಯುವುದು), ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಪ್ರಕರಣ ದಾಖಲಾಗಿದೆ.










