ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ನಲ್ಲಿ ಶೇ.100 ರಷ್ಟು ಹಾಗೂ ಎರಡನೇ ಡೋಸ್ ನಲ್ಲಿ ಶೇ.85.3 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15-17 ವರ್ಷದ ಮಕ್ಕಳಲ್ಲಿ ಶೇ.67.5% ಮೊದಲ ಡೋಸ್ ಆಗಿದೆ. 4,85,818 ಬೂಸ್ಟರ್ ಡೋಸ್ ನೀಡಲಾಗಿದೆ. ಒಟ್ಟು 9,33,92,626 ಡೋಸ್ ಗಳನ್ನು ಈವರೆಗೆ ನೀಡಲಾಗಿದೆ. ಲಸಿಕಾಕರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಏರುತ್ತಿದೆ. ಮತ್ತೆ ಎರಡು ಮೂರು ವಾರಗಳಲ್ಲಿ ಕಡಿಮೆಯಾಗಲಿದೆ ಎಂದ ಅವರು, ಆಸ್ಪತ್ರೆ ದಾಖಲಾತಿಗೆ ಹೆಚ್ಚು ಗಮನ ನೀಡಲಾಗಿದೆ. ಕಳೆದ ಮೂರು ದಿನದಲ್ಲಿ ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಐಸಿಎಂಆರ್ ಹೇಳಿದೆ. ಅದರನ್ವಯ ಕ್ರಮ ವಹಿಸಲಾಗುತ್ತಿದೆ. ಜನವರಿಯಲ್ಲಿ 32 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಸಮಾನತೆ ನೀಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ. ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಹಾಗೂ ಲಿಂಗ ಸಮಾನತೆ ತರಲು ಪ್ರಯತ್ನಿಸಬೇಕಿದೆ ಎಂದ ಅವರು, ಕೆಲ ವರ್ಷಗಳಿಂದ ಲಿಂಗಾನುಪಾತವೂ ಹೆಚ್ಚಾಗಿದೆ. 2001ರಲ್ಲಿ 946 ಇದ್ದ ಲಿಂಗಾನುಪಾತ, 2018ರಲ್ಲಿ 957ಕ್ಕೇರಿದೆ. ಅಂದರೆ, ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ. ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.










