ಹಾವೇರಿ : ದೇಶದಾದ್ಯಂತ ನಿನ್ನೆಯಿಂದ ಮೂರನೇ ಹಂತದ ಕೊರೊನಾ ಲಸಿಕೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಆಸ್ಪತ್ರೆಗೆ ತೆರಳಿ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಮಾರ್ಗಸೂಚಿಗಳನ್ನು ಪಾಲಿಸಿದ್ದರು. ಆದರೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮಾತ್ರ ಆಸ್ಪತ್ರೆ ಸಿಬ್ಬಂದಿಯನ್ನೇ ಮನೆಗೆ ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡಿದ್ದಾರೆ. ಇವರ ಈ ನಡವಳಿಕೆಗೆ ಕೆಲವರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಸಿಕೆ ಪಡೆದುಕೊಳ್ಳುವವರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ನಿಗದಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಪಡೆಯಬೇಕು. ಲಸಿಕೆ ಪಡೆದ ನಂತರ ಅರ್ಧಗಂಟೆ ಆಸ್ಪತ್ರೆಯಲ್ಲಿ ವೈದ್ಯರ ಅಬ್ಸರ್ ವೇಷನ್ ನಲ್ಲಿರಬೇಕು. ಆದರೆ ಸಚಿವರು ಆಸ್ಪತ್ರೆಗೆ ತೆರಳದೇ ಮನೆಯಲ್ಲಿ ತಮ್ಮ ಜೊತೆ ಪತ್ನಿಗೂ ಕೊರೊನಾ ಲಸಿಕೆ ಕೊಡಿಸಿಕೊಂಡಿದ್ದಾರೆ.
ಮನೆಗೆ ವೈದ್ಯರನ್ನು ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಬಿ.ಸಿ ಪಾಟೀಲ್ ಅವರು ಮಾರ್ಗಸೂಚಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ನಿನ್ನೆ ತಡವಾಗಿ ಮನೆಗೆ ಬಂದೆ. ಬೆಳಿಗ್ಗೆ ಜನರು ಮನೆ ಬಳಿ ಬಂದಿದ್ದಾರೆ. ಹೀಗಾಗಿ ಮನೆಗೆ ವೈದ್ಯರನ್ನು ಕರೆಸಿ ಲಸಿಕೆ ಹಾಕಿಸಿಕೊಂಡೆ. ಆದರೆ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ವಿಚಾರ ಗೊತ್ತಿಲ್ಲ. ವಿಚಾರ ಗೊತ್ತಿದ್ದರೇ ನಾನೇ ಆಸ್ಪತ್ರೆಗೆ ಹೋಗುತ್ತಿದ್ದೆ ಎಂದಿದ್ದಾರೆ.










