ವಿಜಯಪುರ : ‘ನಾನು ಯಾರ ತಂಟೆಗೇ ಹೋಗಲ್ಲ, ನನ್ನ ತಂಟೆಗೆ ಬಂದವರನ್ನ ಸುಮ್ಮನೆ ಬಿಡಲ್ಲ’ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಅವರು ಆಕ್ರೋಶ ಹೊರಹಾಕಿದ್ದಾರೆ.
ನಗರದ ಇಬ್ರಾಹಿಂಪುರ ರೈಲ್ವೆ ನಿಲ್ದಾಣ ಆವರಣದಲ್ಲಿ ಇಬ್ರಾಹಿಂಪುರ ಲೆವೆಲ್ ಕ್ರಾಸಿಂಗ್ ಗೇಟ್ 80ರ ಬದಲಿಗೆ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರು ನಮಗೆ ವಿರೋಧ ಮಾಡೋದು ನಿಜ. ನಾವು ಯಾರ ಹೆಸರನ್ನ ಸಹ ಹೇಳಲ್ಲ. ವಿರೋಧಿಸುವರರು ಏನಾದ್ರೂ ಮಾಡಿಕೊಳ್ಳಲಿ. ನನ್ನ 45 ವರ್ಷದ ರಾಜಕಾರಣದಲ್ಲಿ ಯಾರನ್ನು ಕೆಣಕಿಲ್ಲ. ಪದೇ ಪದೇ ನನ್ನನ್ನು ಕೆಣಕಿದರೆ ನಾನು ಸುಮ್ಮನಿರಲ್ಲ. ಹರಿಜನ ಅಂದರೆ ಅಷ್ಟು ಹಗುರಾನಾ? .ನಾನು ಕೈ ಮುಗಿದು ಕೇಳುತ್ತೇನೆ, ನನ್ನ ತಂಟೆಗೆ ಬರಬೇಡಿ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ನನ್ನ ವಿರುದ್ಧ ಅನಾವಶ್ಯಕವಾಗಿ ಮಾತನಾಡಿದರೆ, ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಜಿಗಜಿಣಗಿ ಅವರು ಎಚ್ಚರಿಸಿದರು.










