ಬೆಂಗಳೂರು : ಯುವತಿಯೊಬ್ಬಳ ಜೊತೆ ರಮೇಶ್ ಜಾರಕಿಹೊಳಿ ಇರುವ ಸರಪ-ಸಲ್ಲಾಪದ ದೃಶ್ಯಗಳ ಸಿಡಿಯೊಂದು ಸ್ಫೋಟಗೊಂಡಿದೆ. ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ಥ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ವಿಡಿಯೋದಲ್ಲಿರುವ ಯುವತಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಇದೆಲ್ಲಾ ರಾಜಕೀಯ ಷಡ್ಯಂತ್ರ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ನಾನು ತಪ್ಪೇ ಮಾಡಿಲ್ಲ. ಈ ಬಗ್ಗೆ ತನಿಖೆ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಇದರಿಂದ ನನಗೆ ಆಘಾತವಾಗಿದೆ. ನಾವು ಯಾವುದಕ್ಕೂ ಹೆದರೋದಿಲ್ಲ, ಸತ್ಯ ಗೊತ್ತಾಗುತ್ತದೆ. ಒಂದು ವೇಳೆ ತಾನು ತಪಿತಸ್ಥ ಎಂಬುದು ತನಿಖೆಯಿಂದ ತಿಳಿದುಬಂದರೆ, ಸಚಿವ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ನನಗೆ ಆ ಯುವತಿ ಯಾರೂ ಅನ್ನೋದು ಗೊತ್ತಿಲ್ಲ. ಆಕೆಯನ್ನು ನೋಡಲೂ ಇಲ್ಲ. ಈ ವಿಡಿಯೋ ಸಂಪೂರ್ಣ ನಕಲಿಯಾಗಿದೆ. ನಮ್ಮ ಕುಟುಂಬ ದೊಡ್ಡ ಮನೆತನವಾಗಿದೆ. ನಾನು ಮಂತ್ರಿ ಎಂಬುದನ್ನು ಬಿಟ್ಟು ಬಿಡಿ, ಆದರೆ ಕುಟುಂಬಕ್ಕೆ ಧಕ್ಕೆಯಾದರೆ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ. ಆ ವಿಡಿಯೋ ಸಿಡಿ ನಕಲಿಯಾಗಿದೆ ಎಂದು ತಿಳಿಸಿದರು.
ನಾನು ಕೂಡಲೇ ದೆಹಲಿಗೆ ಹೊರಡುತ್ತೇನೆ. ಸಿಎಂ ಬಳಿ ಮಾತನಾಡಿದ್ದೇನೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.










