ಹಾಸನ : ಕೋರ್ಟ್ ಆವರಣದಲ್ಲಿಯೇ ಪತಿಯೇ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಪತಿ ಶಿವಕುಮಾರ್ ಎಂಬಾತ ಚಾಕುವಿನಿಂದ ಪತ್ನಿ ಚೈತ್ರಾಳ ಕತ್ತು ಕೊಯ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಚೈತ್ರಾ ಮೃತಪಟ್ಟಿದ್ದಾರೆ. ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಅವೇರಹಳ್ಳಿ ಗ್ರಾಮದ ಚೈತ್ರಾ ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಹೆಣ್ಣುಮಕ್ಕಳಿದ್ದು, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಮೂರು ವರ್ಷಗಳ ಹಿಂದೆ ವಿಚ್ಛೇದನಕ್ಕಾಗಿ ಶಿವಕುಮಾರ್ ಕೋರ್ಟ್ ಮೊರೆಹೋಗಿದ್ದನು.
ಚೈತ್ರಾ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇಂದು ಹೊಳೆನರಸೀಪುರದ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆದಿದ್ದು, ಇಲ್ಲಿ ನ್ಯಾಯಧೀಶರು ದಂಪತಿ ಮನವೊಲಿಸಿ ಒಂದಾಗಿ ಬಾಳುವಂತೆ ತಿಳಿ ಹೇಳಿದ್ದರು. ನಂತರ ಇಬ್ಬರು ಪರಸ್ಪರ ಮಾತನಾಡಿಕೊಂಡು ಬರುವಂತೆ ಕಳುಹಿಸಿದ್ದರು. ಈ ವೇಳೆ ಚೈತ್ರಾ ಮಗಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಕೆಯನ್ನು ಹಿಂಬಾಲಿಸಿ ಹೋದ ಶಿವಕುಮಾರ್ ಶೌಚಾಲಯದಲ್ಲೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪರಾರಿಯಾಗಲು ಆಗಲು ಯತ್ನಿಸಿದ್ದಾನೆ.
ಈ ವೇಳೆ ಸಾರ್ವಜನಿಕರು ಶಿವಕುಮಾರ್ ನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚೈತ್ರಾರನ್ನು ಕೂಡಲೇ ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್ ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚೈತ್ರಾ ಕೊನೆಯುಸಿರೆಳೆದಿದ್ದಾರೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










