ಬೆಂಗಳೂರು: ಕೋವಿಡ್ ನಂತರದ ಕಾಲಘಟ್ಟದಲ್ಲಿ ಎಲ್ಲೆಡೆ ಹಠಾತ್ ಸಾವುಗಳ ಬಗ್ಗೆ ತನಿಖೆ ನಡೆಸಲು ತಜ್ಞರು ಮತ್ತು ವಿಜ್ಞಾನಿಗಳ ಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಹೃದಯಾಘಾತ, ಹೃದಯಸ್ಥಂಭನ ಸೇರಿ ವಿವಿಧ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೇ ಜನ ಹಠಾತ್ ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ಮತ್ತು ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಈ ಸಾವುಗಳು ಸಂಭವಿಸುತ್ತಿರಬಹುದು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಈ ಕುರಿತು ತನಿಖೆ ನಡೆಸಬೇಕು ಎಂಬ ಕೂಗು ಎದ್ದಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಈಗ ಸ್ಪಂದಿಸಿದ್ದಾರೆ. ಕೋವಿಡ್ ಕಾಲದ ಅನಂತರ ಎಳೆಯ ವಯಸ್ಸಿನವರು, ಯುವಜನರು ಸಹಿತ ಬದುಕಿ ಬಾಳಬೇಕಾದವರು ಇದ್ದಕ್ಕಿದ್ದಂತೆ ಇಲ್ಲವಾಗುತ್ತಿದ್ದಾರೆ, ಇವರನ್ನು ನಂಬಿದ ಕುಟುಂಬಗಳು ಬೀದಿಪಾಲಾಗುತ್ತಿವೆ. ಇದೊಂದು ಗಂಭಿರ ಸಮಸ್ಯೆ, ಆದಷ್ಟು ಶೀಷ್ರ ಸಮಸ್ಯೆಯ ಮೂಲ ಪತ್ತೆಮಾಡಿ, ಹಠಾತ್ ಸಾವೀಗೀಡಾದವರ ಬಗ್ಗೆ ಅಧ್ಯಯನ ನಡೆಸಲು ಈ ಸಮಿತಿ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಅಧಿಕಾರಿಗಳಿಗೆ ತಿಳಿಸಿದ್ದಾರೆ.










