ಬಳ್ಳಾರಿ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಇಂದಿರಾ ನಗರದ ಏಳನೇ ಅಡ್ಡರಸ್ತೆಯ ನಿವಾಸಿ ಸಿದ್ದಪ್ಪನವರ ಪತ್ನಿ ಸುನಿತಾ (25) ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತಡರಾತ್ರಿ ಮನೆಯ ಮುಂಭಾಗದಲ್ಲಿರುವ ನೀರಿನ ಟ್ಯಾಂಕ್ ನೊಳಗೆ ಮಹಿಳೆ ತನ್ನಿಬ್ಬರು ಮಕ್ಕಳನ್ನು ಮುಳುಗಿಸಿದ್ದಾಳೆ. ಬಳಿಕ ತಾನೂ ಕೂಡ ನೀರಿನೊಳಗೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದ್ದು, ಸಿದ್ದಪ್ಪ ಹಾಗೂ ಪತ್ನಿ ಸುನೀತಾ ಅವರ ನಡುವೆ ಯಾವಾಗಲೂ ಕ್ಷುಲ್ಲಕ ಕಾರಣಗಳಿಗೆ ಜಗಳವಾಗುತ್ತಿತ್ತು. ಅದರಂತೆ ನಿನ್ನೆಯೂ ಸಹ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಪತ್ನಿ ಸುನೀತಾ ತನ್ನ ನಾಲ್ಕು ವರ್ಷದ ಯಶವಂತ್ ಹಾಗೂ ಮೂರು ವರ್ಷದ ಸಾನ್ವಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










