ಖಾಸಗಿ ಬಸ್‌ಗೆ ಕ್ರೂಸರ್ ವಾಹನ ಡಿಕ್ಕಿ- ಮಹಾರಾಷ್ಟ್ರದಲ್ಲಿ ಬಾಗಲಕೋಟೆಯ ನಾಲ್ವರು ದುರ್ಮರಣ…

17
firstsuddi

ಸಾಂಗ್ಲಿ (ಮಹಾರಾಷ್ಟ್ರ): ಖಾಸಗಿ ಬಸ್‌ಗೆ ಹಿಂಬದಿಯಿಂದ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಅಸುನೀಗಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಂಭುಲ್ವಾಡಿ ಪ್ರದೇಶದ ವಿಜಯಪುರ – ಗುಹಾಗರ್ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮೃತರೆಲ್ಲರೂ ಕರ್ನಾಟಕದ ಬಾಗಲಕೋಟೆ ಮೂಲದವರೆಂದು ತಿಳಿದುಬಂದಿದೆ.

ಮೃತಪಟ್ಟವರನ್ನು ಕನಮಡಿ ಗ್ರಾಮದ ಅನುಸೂಯಾ ಮೋರೆ (56), ಲೋಕಾಪುರ ಗ್ರಾಮದ ನಿವೇದಿತಾ (17) ರೆಹಮತ್ ಪುರದ ಭಾಗ್ಯಶ್ರೀ ಅಂಬೇಕರ್ (18) ಹಾಗೂ ಅಡಿಹುಡಿ ಗ್ರಾಮದ ಉಜ್ವಲಾ ಸಿಂಧೆ (19) ಎಂದು ಗುರುತಿಸಲಾಗಿದೆ.

ಬಾಗಲಕೋಟೆಯ ಜಮಖಂಡಿಯ ಜನರು ಮದುವೆ ಸಮಾರಂಭಕ್ಕೆ ಸಾಂಗ್ಲಿಯ ತಾಸಗಾಂವ್ ತಾಲೂಕಿನ ಸವರ್ಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಜಂಭುಲ್ವಾಡಿ ಗ್ರಾಮದ ಬಳಿ ಖಾಸಗಿ ಬಸ್‌ಗೆ ಕ್ರೂಸರ್ ಗುದ್ದಿದೆ. ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್​​​ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಕ್ರೂಸರ್​​​ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಭಾರಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ.

ಅಲ್ಲದೆ, ದುರ್ಘಟನೆಯಲ್ಲಿ ಇತರ 11 ಜನರು ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಧಲ್ಗಾಂವ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವವರನ್ನು ಮೀರಜ್‌ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.