ಮಂಡ್ಯ: ಮಂಡ್ಯ ಲೋಕಸಭಾ ಅಖಾಡ ತೀವ್ರ ಕುತೂಹಲ ಮೂಡಿಸಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಲಿದ್ದಾರೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ದರ್ಶನ್, ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅಂದು ಮಗನ ವಿರುದ್ಧ ಪ್ರಚಾರ ಮಾಡಿ ಸುಮಲತಾ ರನ್ನು ಗೆಲ್ಲಿಸಿಕೊಂಡಿದ್ದ ದರ್ಶನ್, ಇಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಚಾರಕ್ಕೆ ಇಳಿದಿದ್ದಾರೆ.
ಮಂಡ್ಯದಲ್ಲಿ ದರ್ಶನ್ ಬೆಂಬಲಿಸುವ ದೊಡ್ಡ ಒಕ್ಕಲಿಗರ ಪಡೆಯಿದ್ದು, ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ದರ್ಶನ್ ಫ್ಯಾನ್ಸ್ ಇದ್ದಾರೆ. ಅಭಿಮಾನಿಗಳ ವೋಟ್ ಕಾಂಗ್ರೆಸ್‌ಗೆ ಬಂದರೆ ಶಕ್ತಿ ದುಪ್ಪಟ್ಟಾಗಲಿದೆ.
ಹುಸ್ಕೂರು ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ರೋಡ್ ಶೋ ನಡೆಸಿದರು. ನಟ ದರ್ಶನ್ ನೋಡಲು ಮಂಡ್ಯದಲ್ಲಿ ಜನರು ಮುಗಿಬಿದ್ದಿದ್ದು, ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ. ದರ್ಶನ್ ರೋಡ್ ಶೋಗೆ ಶಾಸಕ ನರೇಂದ್ರ ಸ್ವಾಮಿ, ಕದಲೂರು ಉದಯ್ ಸಾಥ್ ನೀಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ ನಟ ದರ್ಶನ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾನು ಮೊದಲೇ ಹೇಳಿ ಬಿಡ್ತೀನಿ. ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಬರಲ್ಲ, ಬರೋದು ಇಲ್ಲ. ನಾನು ಪ್ರಚಾರಕ್ಕೆ ಬರೋದು ಬರೀ ವ್ಯಕ್ತಿ ಪರ. ಇದೇ 5 ವರ್ಷದ ಕೆಳಗೆ ಶಾಸಕರಾದ ನರೇಂದ್ರಣ್ಣ ಅವರು ಮಾಡಿದಂತಹ ಸಹಾಯವನ್ನು ನೆನಪಿಸಿಕೊಳ್ಳುತ್ತೇವೆ. ಅವರ ಪ್ರೀತಿ, ಪ್ರೇಮ ಯಾವಾಗಲು ನೆನಪಿಸಿಕೊಳ್ಳುತ್ತೇವೆ. ಅವರ ಆಶೀರ್ವಾದವನ್ನು ಕೇಳಿ ಕೊಳ್ಳುತ್ತೇವೆ ಎಂದರು.
ಸುಮಮ್ಮ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಅಂದ್ರೆ ನಮಗೆ ಸಹಾಯ ಮಾಡಬೇಕು ಅಂತ ನರೇಂದ್ರ ಸ್ವಾಮಿ ಮೊದಲೇ ಕೇಳಿದ್ದರು. ಫಸ್ಟ್ ಬಂದವರಿಗೆ ಫಸ್ಟ್ ಆದ್ಯತೆ ನೀಡಿದ್ದೇನೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಅಮೂಲ್ಯವಾದ ಮತ ಹಾಕಿ ಎಂದು ದರ್ಶನ್ ಪ್ರೀತಿಯಿಂದ ಕೇಳಿ ಕೊಂಡಿದ್ದಾರೆ.










