ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ವಿಧಿವಶ…

74
firstsuddi

ಮುಂಬೈ: ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ 99 ವರ್ಷದ ಬಾಬಾಸಾಹೇಬ್ ಪುರಂದರೆ ಇಂದು ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಬಾಬಾಸಾಹೇಬ್ ಪುರಂದರೆ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಬಾಬಾಸಾಹೇಬ್ ಪುರಂದರೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅವರ ನಿಧನದಿಂದ ಇತಿಹಾಸ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸುವಂತೆ ಮಾಡಿದ ಪುರಂದರೆ ಅವರ ಕೆಲಸಕ್ಕೆ ನಾವು ಕೃತಜ್ಞರಾಗಿರಬೇಕು. ಅವರ ಇನ್ನಿತರ ಕೆಲಸಗಳು ಕೂಡ ಇತಿಹಾಸದಲ್ಲಿ ಅಜರಾಮರವಾಗಿರಲಿವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬಾಬಾಸಾಹೇಬ್ ಪುರಂದರೆ ಅವರು ಛತ್ರಪತಿ ಶಿವಾಜಿಯ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 2019ರಲ್ಲಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಮತ್ತು 2015ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.