ಖ್ಯಾತ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

78
firstsuddi

ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್
ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಚೆನ್ನೈನಲ್ಲಿ ಜಯಪ್ರದಾ ಅವರು ರಾಮ್ ಕುಮಾರ್ ಮತ್ತು ರಾಜ ಬಾಬು ಜೊತೆ ಸೇರಿ ಎರಡು ಚಿತ್ರಮಂದಿರಗಳನ್ನು ನಡೆಸುತ್ತಿದ್ದರು. ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಬಳದಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿಯವರು ಇಎಸ್ಐ ಹಣ ಕಡಿತ ಮಾಡಿಕೊಳ್ಳುತ್ತಿದ್ದರು. ಆದರೆ ಅದನ್ನು ಸರ್ಕಾರಿ ಕಾರ್ಮಿಕರ ವಿಮಾ ನಿಗಮಕ್ಕೆ ಜಯಪ್ರದಾ ಪಾವತಿಸುತ್ತಿರಲಿಲ್ಲ. ತಮಗೆ ತಮ್ಮ ಪಾಲಿನ ಇಎಸ್ಐ ಸಿಗುತ್ತಿಲ್ಲ ಎಂದು ಕಾರ್ಮಿಕರೊಬ್ಬರು ತಕರಾರು ತೆಗೆದಿದ್ದರು. ಆಗ ಸರ್ಕಾರಿ ಕಾರ್ಮಿಕರ ವಿಮಾ ನಿಗಮವು ಜಯಪ್ರದಾ ವಿರುದ್ಧ ದೂರು ದಾಖಲಿಸಿತ್ತು.

ಪ್ರಕರಣವನ್ನು ವಜಾಗೊಳಿಸುವಂತೆ ಜಯಪ್ರದಾ ಸೇರಿದಂತೆ ಮೂವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿದ ಚೆನ್ನೈನ ಎಗ್ಮೋರ್ ನ್ಯಾಯಾಲಯ ಜಯಪ್ರದಾ ಹಾಗೂ ಇತರೆ ಮೂವರಿಗೆ ಆರು ತಿಂಗಳ ಶಿಕ್ಷೆ ವಿಧಿಸಿದೆ.

ಕಾರ್ಮಿಕರಿಗೆ ನೀಡಬೇಕಾದ ಮೊತ್ತವನ್ನು ನೀಡುವುದಾಗಿ ಜಯಪ್ರದಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಅದಕ್ಕೆ ಕಾರ್ಮಿಕ ಸರ್ಕಾರಿ ವಿಮಾ ನಿಗಮದ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಜಯಪ್ರದಾ ಸೇರಿದಂತೆ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬಹುಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಜಯಪ್ರದಾ ಅವರು ಮನೆ ಮಾತಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’, ‘ಶಬ್ದವೇದಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಿರುತೆರೆಯ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.