ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣ – 60 ಸ್ಥಳಗಳ ಮೇಲೆ ಎನ್‍ಐಎ ದಾಳಿ…

63
firstsuddi

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಇಂದು ಬೆಳ್ಳಂಬೆಳಗ್ಗೆ ದೇಶಾದ್ಯಂತ 60 ಸ್ಥಳಗಳ ಮೇಲೆ ದಾಳಿ ನಡೆಸುತ್ತಿದೆ.

ಪ್ರಮುಖ ಆರೋಪಿಗಳಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡೀ ಬ್ರಾರ್ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದೆ. ಸಿಧು ಮೂಸೆವಾಲಾ ಕೊಲೆಯಲ್ಲಿ ಭೂಗತ ಲೋಕದ ಈ ದುಷ್ಕರ್ಮಿಗಳು ವಹಿಸಿದ್ದ ಪಾತ್ರದ ಬಗ್ಗೆ ಎನ್ ಐಎ ಮಾಹಿತಿ ಕಲೆ ಹಾಕುತ್ತಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಪ್ರಗತಿಯಲ್ಲಿದೆ.

ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕಳೆದ ಮೇ ತಿಂಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಆಮ್ ಆದ್ಮಿ ಪಕ್ಷದ ಡಾ.ವಿಜಯ್ ಸಿಂಗ್ಲಾ ವಿರುದ್ಧ ಸೋಲು ಕಂಡಿದ್ದರು. ಪಂಜಾಬ್ ಸರ್ಕಾರ ಸಿಧು ಮೂಸೆವಾಲಾ ಅವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದ ಬೆನ್ನಲ್ಲೇ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.