ನವದೆಹಲಿ: ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ವಿಶ್ಲೇಷಿಸಲಾಗಿದ್ದು, ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಮಧ್ಯಮ ವರ್ಗಕ್ಕೆ ಎಲ್‍ಪಿಜಿ ಬೆಲೆ ಏರಿಕೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ.
ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಮಾತನಾಡಿ, ಕೋವಿಡ್ ಶುರುವಾದ ದಿನದಿಂದ ಎಲ್ ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಕೂಡ ನೀಡಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮಾತ್ರ ಈಗ ಸಬ್ಸಿಡಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.










