ತಿರುವನಂತಪುರಂ : ಗೋಡ್ಸೆ ಮತ್ತು ಮೋದಿಯ ಸಿದ್ಧಾಂತಗಳು ಒಂದೇ ಆಗಿದೆ ಎಂದು ಸಂಸದ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಕೇರಳದ ವಯನಾಡ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗೋಡ್ಸೆ ಮತ್ತು ಪ್ರಧಾನಿ ಮೋದಿ ಅವರ ನಡುವೆ ವ್ಯತ್ಯಾಸಗಳಿಲ್ಲ. ಗೋಡ್ಸೆ ಮತ್ತು ಮೋದಿಯ ಸಿದ್ದಾಂತಗಳು ಒಂದೇ ಆಗಿದೆ. ಆದರೆ ಇದನ್ನು ಒಪ್ಪಿಕೊಳ್ಳುವ ಧೈರ್ಯ ಪ್ರಧಾನಿ ಮೋದಿ ಅವರಿಗೆ ಇಲ್ಲ. ಪ್ರಧಾನಿ ಈ ಮಾತನ್ನು ಬಹಿರಂಗವಾಗಿ ಹೇಳಲಿ ಎಂದು ವ್ಯಂಗ್ಯವಾಡಿದರು. ಭಾರತದ ನಿಜವಾದ ಶಕ್ತಿ ಏನೆಂಬುವುದು ತಿಳಿಯದ ವ್ಯಕ್ತಿ ಇಂದು ದೇಶವನ್ನು ಆಳುತ್ತಿದ್ದಾರೆ. ಅಂದು ಗೋಡ್ಸೆ ಮಹಾತ್ಮ ಗಾಂಧೀಜಿಯನ್ನು ಹತ್ಯೆಮಾಡುವಾಗ ಗಾಂಧೀಜಿಯವರ ಕಣ್ಣು ನೋಡಿರಲಿಲ್ಲ. ಏಕೆಂದರೆ ಒಬ್ಬ ಸುಳ್ಳ ಸತ್ಯದ ಕಣ್ಣುಗಳನ್ನು ಎಂದಿಗೂ ನೋಡುವುದಿಲ್ಲ. ಇಂದು ಪ್ರಧಾನಿ ಮೋದಿ ಅವರೂ ಕೂಡಾ ಅದನ್ನೇ ಮಾಡುತ್ತಿದ್ದಾರೆ. ಮೋದಿ ಅವರ ಬಳಿ ನಿರುದ್ಯೋಗದ ಬಗ್ಗೆ ಕೇಳಿದರೆ ಅವರು ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಅವರು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಉದ್ಯೋಗ ಸೃಷ್ಠಿಸುವುದಿಲ್ಲ. ಕಾಶ್ಮೀರ ಹಾಗೂ ಅಸ್ಸೋಂನಲ್ಲಿ ಉರಿಯುತ್ತಿರುವ ಸ್ಥಿತಿ ಉದ್ಯೋಗ ಸೃಷ್ಟಿಸುವುದಿಲ್ಲ ಎಂದು ಕಿಡಿಕಾರಿದರು.










