ಚನ್ನಪಟ್ಟಣ ಚುನಾವಣೆ ನಿಖಿಲ್‍ಗೆ ಟಿಕೆಟ್ ಕೊಡೋದಿದ್ದರೆ ಕೊಡಲಿ: ಸಿ.ಪಿ.ಯೋಗೇಶ್ವರ್.

38

ಬೆಂಗಳೂರು : ಚನ್ನಪಟ್ಟಣದ ಟಿಕೆಟ್ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರು ಹೆಚ್.ಡಿ.ಕುಮಾರಸ್ವಾಮಿ ಕುರಿತು ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದಾರೆ. ನಾನು ಕಾಂಗ್ರೆಸ್ ನಾಯಕರ ಭೇಟಿ ಆಗೋದಾದರೆ ನೇರವಾಗಿಯೇ ಭೇಟಿ ಆಗುತ್ತೇನೆ, ಯಾವುದೇ ಮುಚ್ಚುಮರೆ ಮಾಡಲ್ಲ. ಇದುವರೆಗೆ ಯಾರನ್ನೂ ಭೇಟಿ ಮಾಡಿಲ್ಲ. ಕುಮಾರಸ್ವಾಮಿ ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಅವರು ಟಿಕೆಟ್ ಕೊಡುವುದಿದ್ರೆ ಅವರ ಮಗನಿಗೇ ಕೊಡಲಿ. ಆದರೆ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೆ ಅಂತ ಅನಾವಶ್ಯಕ ಆರೋಪ ಮಾಡೋದು ಬೇಡ ಎಂದು ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನನಗೆ ಅವಕಾಶ ಕೊಟ್ರೆ ಎನ್‍ಡಿಎ ಅಭ್ಯರ್ಥಿ ಆಗ್ತೇನೆ. ನನಗೆ ಅವಕಾಶ ಸಿಗಬೇಕು ಅಷ್ಟೇ. ನಾನು ಹಾಗೂ ನಮ್ಮ ಮಿತ್ರಪಕ್ಷದ ನಾಯಕ ಕುಮಾರಸ್ವಾಮಿ ಮೂರು ದಿನಗಳಿಂದ ಚರ್ಚೆ ಮಾಡ್ತಿದೀವಿ. ನಾನು ಜೆಡಿಎಸ್‍ನಿಂದ ನಿಂತರೆ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ನಿಲ್ಲಬೇಕು ಅಂತ ಆಸೆ ಇದೆ. ಅವರು ಆಗಲ್ಲ ಅಂತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅವರ ಮಗನಿಗೆ ಟಿಕೆಟ್ ಕೊಡಬೇಕು ಅಂತ ಇದೆ. ನಿಖಿಲ್‍ಗೆ ಟಿಕೆಟ್ ಕೊಡೋದಿದ್ದರೆ ಕೊಡಲಿ ಎಂದರು. ನಾನು ಸುದೀರ್ಘವಾಗಿ ನನ್ನ ತಾಲೂಕಿನ ಜನರ ಜೊತೆ ಚರ್ಚೆ ಮಾಡಿದೆ. ಅವರೆಲ್ಲ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಬೇಡ ಅಂತಿದ್ದಾರೆ. ಮೊದಲೇ ನನಗೆ ಪಕ್ಷಾಂತರಿ ಅಂತ ಕರೀತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಅಂತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿಸಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡ್ತಿಲ್ಲ ಎಂದರು. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಆ ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ. ಅದು ಕುಮಾರಸ್ವಾಮಿ ಅವರ ಕ್ಷೇತ್ರನೇ, ಅವರೇ ತೀರ್ಮಾನ ಮಾಡಬೇಕು. ಆದರೆ ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸು ಇದ್ದಿದ್ರೆ ಉಪಯೋಗ ಆಗ್ತಿತ್ತು. ಯಡಿಯೂರಪ್ಪ ಈಗ ಹೇಳಿಕೆ ಕೊಡೋ ಅಗತ್ಯ ಇರಲಿಲ್ಲ. ಅವರು ಉದ್ದೇಶಪೂರ್ವಕ ಹೇಳಿಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ಹೇಳಿಕೆ ಹಿಂದೆ ದುರುದ್ದೇಶ ಇದೆ. ಯಡಿಯೂರಪ್ಪ ಮೂಲಕ ಉದ್ದೇಶಪೂರ್ವಕವಾಗಿ ಆ ಹೇಳಿಕೆ ಕೊಡಿಸಿದ್ದಾರೆ ಎಂದರು.