ಚಾಕು ಇರಿತಕ್ಕೆ ಒಳಗಾದ ಲೇಖಕ ಸಲ್ಮಾನ್ ರಶ್ದಿ – ಸ್ಥಿತಿ ಗಂಭೀರ…

125
firstsuddi

ನ್ಯೂಯಾರ್ಕ್: ಚಾಕು ಇರಿತಕ್ಕೆ ಒಳಗಾದ ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ. ಇರಿತದಿಂದಾಗಿ ಒಂದು ಕಣ್ಣಿಗೆ ತೀವ್ರ ಹಾನಿಯಾಗಿದ್ದು, ದೃಷ್ಟಿ ಕಳೆದುಹೋಗುವ ಸಾಧ್ಯತೆ ಇದೆ. ಯಕೃತ್ತಿಗೂ ಹಾನಿಯಾಗಿದೆ.

ಸಲ್ಮಾನ್ ರಶ್ದಿ ಅವರು ನಿನ್ನೆ ನ್ಯೂಯಾರ್ಕ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಉಪನ್ಯಾಸ ನೀಡುತ್ತಿದ್ದಾಗ ನ್ಯೂಜೆರ್ಸಿಯ ಫೇರ್ ವ್ಯೂನ ಹದಿ ಮತರ್(24) ಎಂಬಾತ ಚಾಕುವಿನಿಂದ ಸತತವಾಗಿ ಇರಿದಿದ್ದಾನೆ. ಸದ್ಯ ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ.

ಅಹ್ಮದ್ ಸಲ್ಮಾನ್ ರಶ್ದಿ ಭಾರತ ಮೂಲದ ಬ್ರಿಟಿಷ್-ಅಮೆರಿಕನ್ ಕಾದಂಬರಿಕಾರ. ಇವರ ಮಿಡ್ ನೈಟ್ಸ್ ಚಿಲ್ಡ್ರನ್ (1981)ಗೆ ಬೂಕರ್ ಪ್ರಶಸ್ತಿ ಬಂದಿತ್ತು. ಜೂನ್ 19, 1947 ರಂದು ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿರುವ ಇವರು, ಕೇಂಬ್ರಿಡ್ಜ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸಿದ್ಧ ಬರಹಗಾರರಾಗಿ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ.

‘ದಿ ಸೈಟಾನಿಕ್ ವರ್ಸಸ್’ ಕಾದಂಬರಿ ಬರೆದ ನಂತರ ಹಲವು ವರ್ಷಗಳ ಕಾಲ ಇವರು ಜೀವ ಬೆದರಿಕೆ ಎದುರಿಸುತ್ತಿದ್ದರು. ಈ ಕಾದಂಬರಿ ಮುಸ್ಲಿಮರ ಧರ್ಮನಿಂದನೆಯಾಗಿದೆ ಎಂಬ ಕಾರಣದಿಂದ 1988 ರಿಂದ ಇರಾನ್ನಲ್ಲಿ ನಿಷೇಧಿಸಲಾಗಿದೆ.