ಬೆಂಗಳೂರು : ಸಹೋದರನ ಮಗನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಮಾಜಿ ಕಾರ್ಪೊರೇಟರ್ ಪತಿ ಆಯುಬ್ ಖಾನ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಬಿಎಂಪಿ 139 ವಾರ್ಡ್ ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯುಬ್ ಖಾನ್ ಮೇಲೆ ಆರೋಪಿ ಮತೀನ್ ನಿನ್ನೆ ಚಾಕುವಿನಿಂದ ಹಲ್ಲೆ ಮಾರಣಾಂತಿಕ ಮಾಡಿದ್ದ. ಕೂಡಲೇ ಆಯುಬ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಚಾಮರಾಜಪೇಟೆ ಪೊಲೀಸರು ಆರೋಪಿ ಮತೀನ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇತ್ತ ಆಯುಬ್ ಖಾನ್ ಸಾವನ್ನಪ್ಪಿರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಡಿ.ಆರ್ ಪೊಲೀಸ್ ವಾಹನ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ
ಕಳೆದ ಕೆಲ ವರ್ಷಗಳಿಂದ ಟಿಪ್ಪುನಗರದ ಖುದಾಯತ್ ಮಸೀದಿಗೆ ಆಯುಬ್ ಖಾನ್ ಪ್ರೆಸಿಡೆಂಟ್ ಆಗಿದ್ದರು. ಈ ಹುದ್ದೆ ಮೇಲೆ ಆಯುಬ್ ಖಾನ್ ಸಹೋದರನ ಮಗ ಮತೀನ್ ಖಾನ್ ಕಣ್ಣಿಟ್ಟಿದ್ದ. ಮಸೀದಿಯ ಪ್ರೆಸಿಡೆಂಟ್ ಹುದ್ದೆ ಬಿಟ್ಟುಕೊಡುವಂತೆ ಆಯುಬ್ ಖಾನ್ ಬಳಿ ಹಲವು ಬಾರಿ ಕೇಳಿದ್ದ. ಇದನ್ನ ನಿರಾಕರಿಸುತ್ತ ಬಂದಿದ್ದ ಮೃತ ಆಯುಬ್ ಖಾನ್. ಇದೇ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ಮೃತ ಆಯುಬ್ ಹಾಗೂ ಮತೀನ್ ನಡುವೆ ಜಗಳ ನಡೆದಿತ್ತು. ನಿನ್ನೆ ರಾತ್ರಿ 7:30 ರ ಸುಮಾರಿಗೆ ಟಿಪ್ಪುನಗರದ ಮಸೀದಿಯಿಂದ ನಮಾಜ್ ಮುಗಿಸಿ ಬರೋ ವೇಳೆ ಆಯುಬ್ ಗೆ ಚಾಕು ಇರಿಯಲಾಗಿದೆ ಎಂದು ಮೃತ ಆಯುಬ್ ಖಾನ್ ಪತ್ನಿ ನಜೀಮಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.










