ಚೆನ್ನೈ: ಚಾರ್ಜ್‍ಗೆ ಇಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಕೋಕಿಲಾಂಪಾಲ್ (33) ಮೃತ ಮಹಿಳೆ. ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದ ಈಕೆಗೆ ಮದುವೆಯಾಗಿದ್ದು, ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.
ಗಂಡ ಮೃತಪಟ್ಟ ಬಳಿಕ ಕೋಕಿಲಾಂಪಾಲ್ ಜೀವನ ನಡೆಸಲು ಮೇಲಕಾಪಿ ಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು. ನಿನ್ನೆ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದಳು. ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕೋಕಿಲಾಂಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಲ್ಲದೆ ಅಂಗಡಿಯಲ್ಲಿದ್ದ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ.
ಸದ್ಯ ಈ ಸಂಬಂಧ ಕೋಕಿಲಾಂಪಾಲ್ ತಂದೆ ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










