ಭುವನೇಶ್ವರ: ಚಾಲಕರ ಮುಷ್ಕರ ಹಿನ್ನೆಲೆ ವಾಹನದ ವ್ಯವಸ್ಥೆ ಮಾಡಲಾಗದೇ ವರ ಹಾಗೂ ಆತನ ಕುಟುಂಬದವರು ರಾತ್ರಿಯಿಡೀ ಬರೋಬ್ಬರಿ 28 ಕಿ.ಮೀ ನಡೆದುಕೊಂಡೇ ಹೋಗಿ ವಧು ಮನೆ ತಲುಪಿರುವ ಘಟನೆ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ಮದುವೆಗಾಗಿ ವರ ನರೇಶ್ ಪ್ರಾಸ್ಕಾ(22) ಮತ್ತು ಅವರ ಕುಟುಂಬ ಸದಸ್ಯರು 28 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಮತ್ತಿತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದುವೇ ಈ ವರನ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಡಿಶಾದಲ್ಲಿ ವಾಣಿಜ್ಯ ವಾಹನಗಳ ಚಾಲಕರು ನಡೆಸುತ್ತಿದ್ದ ಮುಷ್ಕರಕ್ಕೆ ರಾಜ್ಯ ಸರ್ಕಾರ ಅವರ ಎಲ್ಲಾ ಬೇಡಿಕೆಗಳನ್ನು 90 ದಿನಗಳ ಒಳಗಾಗಿ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮುಷ್ಕರವನ್ನು ಸ್ಥಗಿತಗೊಳಿಸಲಾಯಿತು.










