ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ – ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ.

109
firstsuddi

ಚಿಕ್ಕಮಗಳೂರು : ಒಂದನೇ ತರಗತಿ ವಿದ್ಯಾರ್ಥಿ ಹಳ್ಳದಲ್ಲಿ ಕೊಚ್ಚಿಹೋದ ಘಟನೆ ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

ಹೊಸಪೇಟೆಯ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಪ್ರಿತಾ ನಿನ್ನೆ ತನ್ನ ಅಣ್ಣನ ಜೊತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಕಾಲು ಕೆಸರಾಯಿತು ಎಂದು ಅಣ್ಣ-ತಂಗಿ ಇಬ್ಬರೂ ಹಳ್ಳದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿದ್ದರು. ಆ ವೇಳೆ ಸುಪ್ರಿತಾ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ.

ವಿಷಯ ತಿಳಿದ ಕೂಡಲೇ ಸ್ಥಳೀಯರು ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಾಲಕಿ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದರು. ಸ್ಥಳೀಯರು ಜೊತೆ ಅಧಿಕಾರಿಗಳು ಕೂಡ ನೀರಿನಲ್ಲಿ ಧುಮುಕಿ ಹರಿಯುವ ಹಳ್ಳದಲ್ಲಿ ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಆದರೂ ಬಾಲಕಿ ಪತ್ತೆಯಾಗಲಿಲ್ಲ.

ಮಳೆ ಹಾಗೂ ಕತ್ತಲು ಹೆಚ್ಚಾದ ಕಾರಣ ಅಧಿಕಾರಿಗಳು ಹಾಗೂ ಸ್ಥಳೀಯರು ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಕೈಬಿಟ್ಟಿದ್ದಾರೆ. ಇಂದು ಬೆಳಗ್ಗೆ ಮತ್ತೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಲಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ಡಿಎಫ್ ಒ ಶಶಿಧರ್, ಚಿಕ್ಕಮಗಳೂರು ತಹಶೀಲ್ದಾರ್ ಕೂಡ ಮೊಕ್ಕಾಂ ಹೂಡಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿ-ಹಳ್ಳ-ಕೊಳ್ಳ-ತೊರೆಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮಲೆನಾಡು ಭಾಗದ 3 ತಾಲೂಕಿಗೆ ರಜೆ ಘೋಷಿಸಿದೆ. ಜಿಲ್ಲೆಯ ಕಳಸ ಹಾಗೂ ಶೃಂಗೇರಿ ತಾಲೂಕಿನ ಎಲ್ಲಾ ಶಾಲೆಗಳು ಹಾಗೂ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ರಜೆ ನೀಡಿ ಆದೇಶಿಸಿದೆ.