ಚಿಕ್ಕಮಗಳೂರು : ಅರಣ್ಯ ಇಲಾಖೆ ಸಿಬ್ಬಂಧಿಗಳು ನಾಶಗೊಳಿಸಿರುವ ಕಾಫಿ ತೋಟಗಳಿಗೆ ಜೆಡಿಎಸ್ ಮುಖಂಡರು ಭೇಟಿ…

202
firstsuddi

ಚಿಕ್ಕಮಗಳೂರು : ತಾಲ್ಲೂಕಿನ ಮಸಗಲಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂಧಿಗಳು ನಾಶಗೊಳಿಸಿರುವ ಕಾಫಿ ತೋಟಗಳಿಗೆ ಜೆಡಿಎಸ್ ಮುಖಂಡರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅರಣ್ಯ ಇಲಾಖೆ ಅಧಿಕಾರಿಗಳು ಫಸಲಿಗೆ ಬಂದಿರುವ ಗಿಡಗಳನ್ನು ಕಡಿದು ಹಾಕುವ ಮೂಲಕ ಬಡ ರೈತರ ಮೇಲೆ ಅಮಾನುಷವಾಗಿ, ಅಮಾನವೀಯವಾಗಿ ನಡೆದು ಕೊಂಡಿದ್ದಾರೆ ಎಂದರು.
ತೋಟಗಳು ಫಸಲಿಗೆ ಬಂದಿರುವ ಕಾರಣ ಕನಿಷ್ಠ ಮೂರು ತಿಂಗಳ ಕಾಲ ಅವಕಾಶ ಕೊಟ್ಟಿದ್ದರೆ ಬಡ ರೈತರು ಬದುಕುತ್ತಿದ್ದರು ಎಂದ ಅವರು ಕೇವಲ ಬದುಕಿಗಾಗಿ ಕೃಷಿ ಮಾಡಿರುವ ಬಡವರ ಮೇಲೆ ಅರಣ್ಯ ಇಲಾಖೆ ನಡೆಸಿರುವ ದೌರ್ಜನ್ಯ ಖಂಡನೀಯ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಮೂಡಿಗೆರೆ ಶಾಸಕರು ಇದನ್ನು ತಡೆಗಟ್ಟಬಹುದಿತ್ತು, ಆದರೆ ಅವರು ಕೈಕಟ್ಟಿ ಕುಳಿತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ರೈತ ವಿರೋಧಿ ಎಂದು ಭಾಸವಾಗುತ್ತಿದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶ ಕೇವಲ ಚಿಕ್ಕಮಗಳೂರು ಜಿಲ್ಲೆಗೆ ಸೀಮಿತವಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುತ್ತದೆ ಆದರೆ ಅಧಿಕಾರಿಗಳು ಮಾತ್ರ ನಮ್ಮ ಜಿಲ್ಲೆಯನ್ನೇ ಗುರಿಯಾಗಿಟ್ಟುಕೊಂಡು ರೈತರಿಗೆ ಬದಲಿ ವ್ಯವಸ್ಥೆ ಕಲ್ಪಿಸದೇ ತೋಟಗಳನ್ನು ಕಡಿದು ನಾಶ ಮಾಡುತ್ತಿರುವುದು ಪೈಶಾಚಿಕ ಕೃತ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಮೂಡಿಗೆರೆ ಶಾಸಕರೂ ಸಹ ಕಾಫಿ ಬೆಳೆಗಾರರಾಗಿದ್ದರೂ ಈ ಘಟನೆ ಬಗ್ಗೆ ದನಿ ಎತ್ತದಿರುವುದು ಹಾಸ್ಯಾಸ್ಪದವಾಗಿದೆ, ಜಿಲ್ಲೆಯ ಜನಪ್ರತಿನಿಧಿಗಳ ಅಸಹಾಯಕತೆ, ದೌರ್ಬಲ್ಯ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಸಂತ್ರಸ್ತರ ಅಳಲು ಆಲಿಸಿದ ಮುಖಂಡರು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಕನಿಷ್ಠ ಫಸಲು ಕುಯ್ಯುವವರೆಗಾದರೂ ತೋಟ ಕಡಿಯಬಾರದು ಎಂದು ಒತ್ತಾಯಿಸುವ ಭರವಸೆ ನೀಡಿದರು.
ಜೆಡಿಎಸ್ ವಕ್ತಾರ ಹೊಲದಗದ್ದೆ ಗಿರೀಶ್, ಶಶಿಧರ್, ಪುಟ್ಟೇಗೌಡ, ಸ್ವಾಮಿ, ದಾನಿಹಳ್ಳಿ ಮಂಜುನಾಥ್ ಹಾಜರಿದ್ದರು.