ಚಿಕ್ಕಮಗಳೂರು : ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕಾಶವಾಣಿ ಎಫ್‍ಎಂ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಬಿಎಸ್‍ಪಿ ಜಿಲ್ಲಾ ಘಟಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಛೇರಿಯ ಶಿರಸ್ತೇದಾರ್ ಮನು ಅವರನ್ನು ಇಂದು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಸ್ಥಳೀಯ ಎಫ್‍ಎಂ ಕೇಂದ್ರಗಳ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಮುಂದಾಗಿರುವ ಪ್ರಸಾರ ಭಾರತಿಯ ಕ್ರಮವನ್ನು ಖಂಡಿಸಿದರು.
ಪ್ರಸಾರ ಭಾರತಿ ಸ್ಥಳೀಯ ಎಫ್‍ಎಂ ಕೇಂದ್ರಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಮೂಲಕ ಆಕಾಶವಾಣಿಯನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಅವರು ಇದರಿಂದಾಗಿ ಎಫ್‍ಎಂ ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸಿ ಜ್ಞಾನವನ್ನು ವೃದ್ದಿಸಿಕೊಳ್ಳುತ್ತಿರುವ ರೈತರು, ಕೃಷಿಕರು ಮತ್ತು ಬಹುಸಂಖ್ಯಾತರಿಗೆ ನಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಎಫ್‍ಎಂ ಕೇಂದ್ರಗಳು ಕಾರ್ಯಕ್ರಮಗಳನ್ನು ನಿಗದಿ üಮಾಡಿರುವ ಸಮಯಕ್ಕೆ ಪ್ರಸಾರ ಮಾಡುತ್ತಿರುವುದರಿಂದಾಗಿ ರೈತರಿಗೆ ಕೃಷಿ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಿದೆ, ಇದೀಗ ಸಂಜೆ 6.50 ಕ್ಕೆ ಬಿತ್ತರವಾಗುತ್ತಿದ್ದ ಕೃಷಿ ರಂಗ ಕಾರ್ಯಕ್ರಮವನ್ನು 5.30ಕ್ಕೆ ನಿಗಧಿಪಡಿಸಿದ್ದು, ಆ ಸಮಯದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಅವರಿಗೆ ಅದನ್ನು ಆಲಿಸಲು ಸಾಧ್ಯವಾಗುವುದಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಸ್ಥಳೀಯ ಎಫ್‍ಎಂ ಕೇಂದ್ರಗಳ ಕಾರ್ಯಕ್ರಮಗಳನ್ನುಮುಂದುವರೆಸಬೇಕು ಎಲ್ಲಾ ಜಿಲ್ಲೆಗಳಲ್ಲೂ ಕೇಂದ್ರಗಳನ್ನು ಸ್ಥಾಪಿಸಬೇಕು. ಆಕಾಶವಾಣಿಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು, ವೈಜ್ಞಾನಿಕವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು, ಹಾಸನದ ಎಫ್‍ಎಂ ಕೇಂದ್ರದ ಸಾಮಥ್ರ್ಯವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ವಸಂತ್, ಹುಣಸೆಮಕ್ಕಿ ಲಕ್ಷ್ಮಣ್, ನವೀನ್, ಹೊನ್ನಪ್ಪ ಹಾಜರಿದ್ದರು.










