ರಾಮನಗರ : ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟಲು ಮೂರು ಅಂಶಗಳ ಸೂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ಸೂಚಿಸಿದ್ದು, ಅದರ ಪ್ರಕಾರ ಕ್ರಮಬದ್ಧವಾಗಿ ಕೊರೊನಾ ಸ್ಥಿತಿಯನ್ನು ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಜಿಲ್ಲೆಯ ಸಂಸದರು, ಎಲ್ಲ ಚುನಾಯಿತ ಪ್ರತಿನಿಧಿಗಳು, ಶಾಸಕರು, ಉನ್ನತ ಅಧಿಕಾರಿಗಳನ್ನು ಒಳಗೊಂಡ ವರ್ಚುಯಲ್ ಸಭೆಯ ಮೂಲಕ ಇಂದು ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದ ಡಿಸಿಎಂ, ಕ್ಷಿಪ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ಮಾಡುವುದು, ಹಾಗೂ ಪಾಸಿಟಿವ್ ಬಂದರೆ ಅಷ್ಟೇ ಕ್ಷಿಪ್ರವಾಗಿ ಚಿಕಿತ್ಸೆ ಆರಂಭಿಸುವ ಮೂರು ಅಂಶಗಳ ಸೂತ್ರವನ್ನು ತಿಳಿಸಿದರು. ಇದರ ಜೊತೆಗೆ ಸರಕಾರದ ಮಾರ್ಗಸೂಚಿಯಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪ್ಪದೇ ಲಸಿಕೆ ಕೊಡಬೇಕು. ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಡಿಸಿಎಂ ಸೂಚಿಸಿದರು.
ಜ್ವರ, ಶೀತ ಇದ್ದರೆ ಕೋವಿಡ್ ಪರೀಕ್ಷೆ ಮಾಡಿ : ಯಾರಿಗೆ ಆಗಲಿ ಶೀತ, ಜ್ವರ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳಿದ್ದರೆ ಕೂಡಲೇ ಅಂಥವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಕೆಲ ಗಂಟೆಗಳಲ್ಲೇ ವರದಿ ಕೊಡುವುದರ ಜೊತೆಗೆ, ಯಾವುದೇ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಅಂತ ಗೊತ್ತಾದ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ಸೋಂಕು ಬಂದ ತಕ್ಷಣ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣ ಸ್ಥಿತಿಗೆ ಹೋಗುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಸಿಜನ್ ಮುಂತಾದವು ಬೇಕಾಗುವುದಿಲ್ಲ. ಈ ಸೂತ್ರದಂತೆ ಕೆಲಸ ಮಾಡಿದರೆ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಎಂದು ಜಿಲ್ಲಾಧಿಕಾರಿಗಳಿಗೆ ಅಶ್ವತ್ಥನಾರಾಯಣರವರು ತೀಸಿದರು.
ಲಸಿಕೆ ಪಡೆಯಲು ಮನವೊಲಿಸಿ : ಅಲ್ಪಸಂಖ್ಯಾತ ಸಮುದಾಯದವರೂ ಸೇರಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಅಂಥವರ ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಿ. ಯಾವುದೇ ಕಾರಣಕ್ಕೂ ಲಸಿಕೆ ಅಭಿಯಾನ ವ್ಯತ್ಯಾಸ ಆಗಬಾರದು. ಎಂದು ಡಿಸಿಎಂ ನಿರ್ದೇಶನ ನೀಡಿದರು.
ಸಿಬ್ಬಂದಿ ಕೊರತೆ ಆಗಬಾರದು: ಶಾಸಕ ರವಿ ಅವರು ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಉತ್ತರ ನೀಡಿದ ಡಿಸಿಎಂ ಅವರು, ಕೂಡಲೇ ಅಗತ್ಯ ಇರುವ ಕಡೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಿ. ಸಂಪನ್ಮೂಲ ಕೊರತೆ ಕಂಡು ಬಂದರೆ ವಿಪತ್ತು ನಿರ್ವಹಣಾ ನಿಧಿಯಿಂದ ಖರ್ಚು ಮಾಡಿ ಎಂದು ಸಲಹೆ ನೀಡಿದರು. ಸಾಧ್ಯವಾದಷ್ಟು ಜನಪ್ರತಿನಿಧಿಗಳು ಸಲಹೆ ಸಹಕಾರ ಪಡೆದುಕೊಳ್ಳಿ. ಅವರು ಎತ್ತುವ ಆಕ್ಷೇಪಗಳಿಗೆ ಕಿವಿಗೊಡಿ. ಸಮಸ್ಯೆಗಳ ಬಗ್ಗೆ ತಿಳಿಸಿದರೆ ಕೂಡಲೇ ಅದನ್ನು ಬಗೆಹರಿಸಿ. ಕೋವಿಡ್ ನಿರ್ವಹಣೆಯಲ್ಲಿ ಮೊದಲಿನಿಂದಲೂ ರಾಮನಗರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಈಗಲೂ ಉತ್ತಮ ನಿರ್ವಹಣೆ ಇದೆ. ದಿನಕ್ಕೆ 1050 ರಿಂದ 1100 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದ್ದೇನೆ. ಹಾಗೆಯೇ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ದಯಾನಂದ ಸಾಗರ್ ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ನಲ್ಲಿ ಬೆಡ್ಗಳು ಸಾಕಷ್ಟು ಲಭ್ಯ ಇವೆ.
ಜಿಲ್ಲೆಯಲ್ಲಿ ಯಾವುದೇ ಸಾವು ಆದರೂ ತಪ್ಪದೇ ಶವ ಪರೀಕ್ಷೆ ಮಾಡಿ. ಜೊತೆಗೆ, ಕೋವಿಡ್ ಕೇರ್ ಸೆಂಟರ್ಗಳಿಗೆ ಎಲ್ಲರೂ ತಪ್ಪದೇ ಭೇಟಿ ನೀಡಿ ಎಂದರು.
ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಲ್ಲಿಯೇ ಕೋವಿಡ್ ಟೆಸ್ಟ್ಗಳನ್ನು ಮಾಡಲಾಗುತ್ತಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೆಲ ಉತ್ತಮ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಕೂಡ ಜಾರಿಗೆ ತರಲಾಗುವುದು ಎಂದು ಡಿಸಿಎಂ ಹೇಳಿದರು. ಎಲ್ಲೆಲ್ಲಿ ಪರೀಕ್ಷೆ ಮಾಡಲಾಗುತ್ತದೆ ಎಂಬ ವಿವರಗಳನ್ನು ಜನರಿಗೆ ವ್ಯಾಪಕವಾಗಿ ತಿಳಿಸುವಂತೆ ಸೂಚಿಸಿದ್ದೇನೆ ಎಂದರು.










