ಇಂದು ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಮತದಾನ…

129
firstsuddi

ಬೆಳಗಾವಿ : ಇಂದು ಮೂರು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಬೆಳಗ್ಗೆಯಿಂದಲೂ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೂ ಮತದಾನ ಆರಂಭಗೊಂಡಿದ್ದು, ಒಟ್ಟು 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಜೆಪಿಯ ಮಂಗಳಾ ಅಂಗಡಿ ಮತ್ತು ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಚುನಾವಣಾ ಕಣದಲ್ಲಿದ್ದಾರೆ. 18,07,250 ಮತದಾರರಿದ್ದು, ಅವರಲ್ಲಿ 9,08,103 ಪುರುಷ ಮತ್ತು 8,99,091 ಮಹಿಳಾ ಮತದಾರರಾಗಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 62 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ 1,14,794 ಮಹಿಳಾ ಮತದಾರರು ಹಾಗೂ 1,24,984 ಪುರುಷ ಮತದಾರರಿದ್ದಾರೆ. ಕಾಂಗ್ರೆಸ್ ನ ಮಾಲಾ ಬಿ.ನಾರಾಯಣರಾವ್, ಬಿಜೆಪಿಯ ಶರಣು ಸಲಗಾರ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸೇರಿದಂತೆ 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. 2,39,782 ಮತದಾರು 12 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಇನ್ನೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಹ ಮತದಾನ ಆರಂಭವಾಗಿದೆ. ಮಸ್ಕಿಯಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ನ ಬಸನಗೌಡ ತುರವಿಹಾಳ ಮಧ್ಯೆ ಫೈಟ್ ಜೋರಾಗಿದೆ. 2,05,429 ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.