ಚಿಕ್ಕಮಗಳೂರು : ಆನೆ ದಂತಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ನಗರದ ಮೂಗ್ತಿಹಳ್ಳಿ ಬಳಿ ನಡೆದಿದೆ. ಬಂಧಿತರನ್ನು ಶೃಂಗೇರಿ ತಾಲ್ಲೂಕಿನ ಯೋಗೀಶ್, ವಿಜಯ್, ಮಧುಸೂದನ್ ಹಾಗೂ ಶಬರೀಶ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಸೆಲೆರಿಯೋ ಕಾರಿನಲ್ಲಿ ಆನೆ ದಂತ ಹಾಗೂ ಐದು ಲಕ್ಷ ನಗದಿನೊಂದಿಗೆ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ವೇಳೆ ಗ್ರಾಮಾಂತರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಶಬರೀಶ್ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ಆಪ್ತನಾಗಿದ್ದು, ನಿನ್ನೆ ಶೃಂಗೇರಿಯ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನಗಳ ಪಾರ್ಕಿಂಗ್‍ಗೆ ಪಟ್ಟಣ ಪಂಚಾಯಿತಿ ಹರಾಜು ಪ್ರಕ್ರಿಯೆಯನ್ನು ನಡೆಸಿತ್ತು. ಆ ಹರಾಜಿನಲ್ಲಿ ಆರೋಪಿ ಶಬರೀಶ್ ಕೂಡಾ ಪಾಲ್ಗೊಂಡಿದ್ದು, ಹರಾಜಿನಲ್ಲಿ ವಾಹನ ಪಾರ್ಕಿಂಗ್ ಗುತ್ತಿಗೆ ಬೇರೆಯವರಿಗೆ ಆಗಿತ್ತು. ಆ ಹರಾಜಿನಿಂದ ಬಂದ 5 ಲಕ್ಷ ಹಣ ಹಾಗೂ 2 ಆನೆದಂತದೊಂದಿಗೆ ಚಿಕ್ಕಮಗಳೂರಿಗೆ ಆಗಮಿಸುವ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










