ಚಿಕ್ಕಮಗಳೂರು : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ಶ್ರದ್ದೆ, ಪರಿಶ್ರಮ, ಸತತ ಪ್ರಯತ್ನ, ನಿರಂತರ ಕಲಿಕೆ ಅಗತ್ಯ : ಪ್ರೊ|| ಸಿ.ಟಿ.ಜಯದೇವ…

587
firstsuddi

ಚಿಕ್ಕಮಗಳೂರು : ಆಧುನಿಕತೆ ಹಾಗೂ ಕನ್ನಡಿಗರ ಒಣ ಪ್ರತಿಷ್ಠೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಎಲ್ಲೆಡೆ ಕಣ್ಮರೆಯಾಗುತ್ತಿರುವುದು ಸಾಮಾನ್ಯ ಸಂಗತಿ, ಇದರ ನಡುವೆ ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕಗಳಿಸಿ ಜಿಲ್ಲೆಗೆ-ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳು ಕನ್ನಡಾಭಿಮಾನಿಗಳಿಗೆ ತುಸು ಸಮಾಧಾನ ತಂದಿದ್ದಾರೆ.
ಕಡೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಯಳ್ಳಂಬಳಸೆ ಗ್ರಾಮದ ವಿದ್ಯಾರ್ಥಿನಿ ವೈ.ಪಿ.ಕಾವ್ಯ ಕನ್ನಡ ಮಾಧ್ಯಮದಲ್ಲಿ 577 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರೆ ಎಸ್.ಎಸ್.ಎಲ್.ಸಿ. ಕನ್ನಡ ಮಾಧ್ಯಮದಲ್ಲಿ ಕಳಸ ಪ್ರಬೋಧಿನಿ ಪ್ರೌಢಶಾಲೆಯ ವಿದ್ಯಾರ್ಥಿ ವಿ.ಆರ್.ವಿಘ್ನೇಶ 607 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ಎನ್.ಆರ್.ಪುರ ತಾಲ್ಲೂಕು ಮುತ್ತಿನಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆಫ್ರಿದ್ ಸಫಾ 579, ಕಡೂರು ತಾಲ್ಲೂಕು ವಡೇರಹಳ್ಳಿ ಮೃತ್ಯುಂಜಯ ಪ್ರೌಢಶಾಲೆಯ ವಿದ್ಯಾರ್ಥಿ ಜಿ.ಎನ್.ರುಚಿತ 589, ಶೃಂಗೇರಿಯ ಜಗದ್ಗುರು ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯ ಕೆ.ಎನ್.ವಿಶ್ವಾಸ್ 574, ಕೊಪ್ಪ ತಾಲ್ಲೂಕು ಬೊಮ್ಲಾಪುರ ಸರ್ಕಾರಿ ಪ್ರೌಢಶಾಲೆಯ ಕೆ.ಆರ್.ಧನಂಜಯ 596, ಜೋಡಿಹೋಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹೆಚ್.ಕೆ.ನಾಗಲಕ್ಷ್ಮೀ 603, ಚಿಕ್ಕಮಗಳೂರು ತಾಲ್ಲೂಕು ತೊಗರಿಹಂಕಲ್ ಸರ್ಕಾರಿ ಪ್ರೌಢಶಾಲೆಯ ಎನ್.ಅಂಕಿತ 583, ತರೀಕೆರೆ ತಾಲ್ಲೂಕು ಹಿರೇಕಾನವಂಗಲ ರುದ್ರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಪಿ.ಲಾಂಚನ 574 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಒಂಭತ್ತೂ ಮಕ್ಕಳು ಬಡತನದಲ್ಲಿ ಬೆಳೆದಿರುವ ಗ್ರಾಮೀಣ ವಿದ್ಯಾರ್ಥಿಗಳಾಗಿರುವುದರ ಜೊತೆಗೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ವಿಶೇಷ.
ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಸಾಧನೆ ಮಾಡಿರುವ ಈ ಸಾಧಕರನ್ನು ನಗರದ ಸುವರ್ಣ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಿಸಿತು, ವಿದ್ಯಾರ್ಥಿಗಳಿಗೆ ಹಾರ ಹಾಕಿ, ಶಾಲು ಹೊದಿಸಿ, ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಐಟಿ ಪ್ರಾಂಶುಪಾಲ ಪ್ರೊ|| ಸಿ.ಟಿ.ಜಯದೇವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ಶ್ರದ್ದೆ, ಪರಿಶ್ರಮ, ಸತತ ಪ್ರಯತ್ನ, ನಿರಂತರ ಕಲಿಕೆ ಅಗತ್ಯ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ನಡೆದ ಮನ್ನಾನ್ ಸಿದ್ದಿಕ್ ಹುಸೇನ್, ಜೈಬುನ್ನೀಸಾ ಹಾಗೂ ದಿ|| ಕಾಳಮ್ಮ ಡಿ.ಎ.ರಾಮೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಸವಾಲುಗಳು ಮತ್ತು ಪರಿಹಾರ ವಿಷಯ ಕುರಿತು ಎಂ.ಎಲ್.ಎಂ.ಎನ್ ಕಾಲೇಜಿನ ಪ್ರಾಂಶುಪಾಲೆ ಪ್ರೊ|| ವಿಜಯಲಕ್ಷ್ಮೀ ದೇಸಾಯಿ ಹಾಗೂ ನೈತಿಕ ಮೌಲ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಕುರಿತು ಶಿಕ್ಷಕ ವಿರೂಪಾಕ್ಷಪ್ಪ ಅಣ್ಣೀಗೆರೆ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಕ್ಕಳನ್ನು ಕನ್ನಡ ಕಲಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಸಂಚಾಲಕ ಎಂ.ಆರ್.ಪ್ರಕಾಶ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಖಜಾಂಚಿ ಚಂದ್ರೇಗೌಡ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು, ಜಾಗರ ಹೋಬಳಿ ಅಧ್ಯಕ್ಷ ಕಳವಾಸೆ ರವಿ ವಂದಿಸಿದರು.