ಚಿಕ್ಕಮಗಳೂರು : ನಗರ ಹೊರವಲಯದ ಹಿರೇಮಗಳೂರು ಸಮೀಪ ರಾಜ್ಯ ಹೆದ್ದಾರಿಯಲ್ಲಿ ಮಾಡಲಾಗುತ್ತಿರುವ ಒಳ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಮಗಾರಿ ಸ್ಥಳಕ್ಕೆ ಬೆಳಿಗ್ಗೆ ಜಮಾಯಿಸಿದ ಗ್ರಾಮಸ್ಥರು ಬೇಕಾಬಿಟ್ಟಿಯಾಗಿ ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ ಗುಣಮಟ್ಟದ ಕಾವiಗಾರಿ ಮಾಡುವಂತೆ ಆಗ್ರಹಿಸಿದರು.
ಬೇಕಾಬಿಟ್ಟಿ ಮತ್ತು ಕಳಪೆ ಕಾಮಗಾರಿಯಿಂದಾಗಿ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ ಒಡೆದು ಹೋಗಿರುವುದರಿಂದಾಗಿ ಗ್ರಾಮಸ್ಥರು ನೀರಿಗೆ ಪರದಾಡುವಂತಾಗಿದೆ, ಒಡೆದು ಹೋಗಿರುವ ಪೈಪ್‍ನಿಂದ ಸುರಿಯುತ್ತಿರುವ ನೀರಿನಿಂದಾಗಿ ರಸ್ತೆ ಕೆಸರುಮಯವಾಗಿದ್ದು, ಪ್ರತಿದಿನ ಜನ ಮತ್ತು ಜಾನುವಾರುಗಳು ಜಾರಿ ಬೀಳುತ್ತಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ ಎಂದು ದೂರಿದರು.
ಬೇಕಾಬಿಟ್ಟಿ ಮತ್ತು ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳು ಇತ್ತ ತಲೆ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಮಳೆಗಾಲ ಮುಗಿಯುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಮತ್ತು ಒಡೆದು ಹೋಗಿರುವ ಕುಡಿಯುವ ನೀರು ಸರಬರಾಜಿನ ಪೈಪನ್ನು ತಕ್ಷಣ ದುರಸ್ಥಿಗೊಳಿಸುವಂತೆ ಆಗ್ರಹಿಸಿದರು.
ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಗ್ರಾಮದ ಮುಖಂಡರಾದ ಎಸ್.ಜೆ.ಶಿವಕುಮಾರ್, ಹೆಚ್.ಎಸ್.ಕುಮಾರಸ್ವಾಮಿ, ಹೆಚ್.ಸಿ.ಗಂಗಾಧರ್, ಹೆಚ್.ಜೆ.ಪ್ರಕಾಶ್, ಹೆಚ್.ಸಿ.ಶ್ರೀಧರ್, ಹೆಚ್.ಎಸ್.ಜಗದೀಶ್, ರವಿಕುಮಾರ್, ಪ್ರದೀಪ್, ಸುರೇಶ್, ಜಯಣ್ಣ, ಹೆಚ್.ಆರ್.ಮಹೇಶ್, ಹೆಚ್.ಡಿ.ಕೇಶವಮೂರ್ತಿ, ರಾಕೇಶ್, ದಿನೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
            
 
		








