ಚಿಕ್ಕಮಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ದ ಪಕ್ಷ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು : ಹೆಚ್.ಹೆಚ್.ದೇವರಾಜ್.

175
firstsuddi

ಚಿಕ್ಕಮಗಳೂರು : ಭೂ ಸ್ವಾಧೀನ ಕಾಯ್ದೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ದ ಜಿಲ್ಲೆಯಲ್ಲಿ ಜನಾಂದೋಲನ ರೂಪಿಸುವ ನಿರ್ಣಯವನ್ನು ನಗರದ ಜೆಡಿಎಸ್ ಕಛೇರಿಯಲ್ಲಿ ಇಂದು ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಕೈಗೊಂಡಿದೆ.
ಜಿಲ್ಲೆಯ ಪ್ರತಿ ಕ್ಷೇತ್ರ ಸಮಿತಿ ಮತ್ತು ಹೋಬಳಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ರೈತರ ಸಭೆ ನಡೆಸಿ ಮೂರೂ ಕಾಯ್ದೆಗಳ ತಿದ್ದುಪಡಿಯಿಂದಾಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಭೂ ಸ್ವಾಧೀನ, ಎಪಿಎಂಸಿ ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ದ ಪಕ್ಷ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಮುಂಬರುವ ಗ್ರಾಮ ಪಂಚಾಯಿತಿ ಮತ್ತು ನಗರ ಸಭೆ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ವಿಭಾಗಗಳ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು ಚುರುಕು ಗೊಳಿಸಬೇಕು, ಸಮಾನ ಮನಸ್ಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಪಕ್ಷಕ್ಕಾಗಿ ದುಡಿದವರಿಗೆ, ನಿಷ್ಠಾವಂತರಿಗೆ ಚುನಾವಣೆಯಲ್ಲಿ ಟಿಕೇಟ್ ನೀಡಬೇಕು ಎಂದು ಸಲಹೆ ಮಾಡಿದರು.
ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ ಎಪಿಎಂಸಿ ಕಾಯ್ದೆ ತಿದ್ದುಪಡಿ ರಾಜ್ಯ ಸರ್ಕಾರ ರೈತರಿಗೆ ಮಾಡಿರುವ ದೊಡ್ಡ ಅನ್ಯಾಯ, ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಯಿಂದ ರೈತ ಸಮುದಾಯ ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಜನ ವಿರೋಧಿ ನೀತಿಯಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿ ಮೂರೂ ಕಾಯ್ದೆಗಳ ತಿದ್ದುಪಡಿ ವಿರುದ್ದ ಸದನದಲ್ಲಿ ವ್ಯಾಪಕ ಚರ್ಚೆ ನಡೆಸಲಾಗುವುದು, ಯಾವುದೇ ಕಾರಣಕ್ಕೂ ಅವು ಜಾರಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ, ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿಗೌಡ ಸೇರಿದಂತೆ ಇತ್ತೀಚೆಗೆ ನಿಧನರಾದ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಸಭೆಯಲ್ಲಿ ಶ್ರದ್ದಾಂಜಿಲಿ ಸಲ್ಲಿಸಲಾಯಿತು.
ಪಕ್ಷದ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಹೊಲದಗದ್ದೆ ಗಿರೀಶ್, ಮಂಜಪ್ಪ, ಡಿ.ಜೆ.ಸುರೇಶ್, ವಿನಯ್‍ರಾಜ್, ನಿಖಿಲ್ ಚಕ್ರವರ್ತಿ, ಕೆ.ಬಿದರೆ ಜಗಧೀಶ್, ಎಂ.ಡಿ.ರಮೇಶ್, ಜಮೀಲ್ ಅಹಮದ್, ಮಾನು ಮಿರಾಂಡ, ನಾಗಪ್ಪ, ಹೆಚ್.ಎಂ.ಕೃಷ್ಣೇಗೌಡ ಉಪಸ್ಥಿತರಿದ್ದರು.