ಚಿಕ್ಕಮಗಳೂರು : ಕೇಸರಿ ಶಲ್ಯ, ಸ್ಕಾರ್ಫ್ ವಿವಾದಕ್ಕೆ ತೆರೆ…

106
firstsuddi

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನ್ಯ ಕೋಮಿನ ವಿದ್ಯಾರ್ಥಿಗಳು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿದ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬರುತ್ತಿದ್ದರು. ಕಳೆದೊಂದು ವಾರದ ಹಿಂದೆ ವಿದ್ಯಾರ್ಥಿಗಳು ಸ್ಕಾರ್ಫ್ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ ಇದೀಗ ಕೇಸರಿ ಶಲ್ಯ ಹಾಗೂ ಸ್ಕಾರ್ಫ್ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ.

ಕಾಲೇಜಿನ ಪ್ರಾಂಶುಪಾಲರು ಇಂದು ಕಾಲೇಜಿನಲ್ಲಿ ಪೋಷಕರ ಸಭೆ ಕರೆದಿದ್ದರು. ಪೋಷಕರ ಸಭೆಯಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ತರಗತಿಯ ಒಳಗೆ ಸ್ಕಾರ್ಫ್ ಧರಿಸುವಂತಿಲ್ಲ, ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಅಷ್ಟೇ ಅವಕಾಶ. ವೇಲ್ ನ್ನು ಪಿನ್ ಗಳಿಂದ ಸುತ್ತಿ ಕಟ್ಟುವಂತಿಲ್ಲ ಎಂದು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.

ಪೋಷಕರ ಸಭೆಯಲ್ಲಿ ಪ್ರಾಂಶುಪಾಲ ಅನಂತ್.ಎಸ್ ಮಾತನಾಡಿ, 2018 ರಲ್ಲಿ ಇದೇ ರೀತಿ ವಿವಾದ ಉಂಟಾಗಿತ್ತು. ಆಗ ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಮಾತ್ರ ಅವಕಾಶ ಕೊಡಲಾಗಿತ್ತು. ಈ ಬಾರಿಯೂ ಎಲ್ಲರ ಅಭಿಪ್ರಾಯವನ್ನು ಪಡೆದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು ಕ್ರಮ ಉಲ್ಲಂಘಿಸದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗುವುದು. ಯಾರಾದರೂ ವಿದ್ಯಾರ್ಥಿಗಳು ಇಂದಿನ ತೀರ್ಮಾನಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಪಾಲಕರನ್ನು ಕರೆಸಿ ವರ್ಗಾವಣೆ ಪತ್ರವನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಕಾಲೇಜಿನಲ್ಲಿ ಭಾವನೆಗಳನ್ನ ಕೆರಳಿಸುವ ಕೆಲಸ ಆಗಬಾರದು. ವಿದ್ಯಾರ್ಥಿಗಳು ಕಲಿಕೆಗೆ ಅಷ್ಟೇ ಆದ್ಯತೆ ನೀಡಬೇಕು ಎಂದರು.