ಚಿಕ್ಕಮಗಳೂರು : ಛತ್ರಪತಿ ಸಾಹು ಮಹಾರಾಜರ ಆದರ್ಶ ಮತ್ತು ಪ್ರಗತಿಪರ ಚಿಂತನೆಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು : ಕೆ.ಟಿ.ರಾಧಾಕೃಷ್ಣ.

244
firstsuddi

ಚಿಕ್ಕಮಗಳೂರು : ಛತ್ರಪತಿ ಸಾಹು ಮಹಾರಾಜರ ಆದರ್ಶ ಮತ್ತು ಪ್ರಗತಿಪರ ಚಿಂತನೆಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಬಹುಜನ ಸಮಾಜಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು.
ನಗರದ ಬಿಎಸ್‍ಪಿ ಕಛೇರಿಯಲ್ಲಿ ಇಂದು ನಡೆದ ಛತ್ರಪತಿ ಸಾಹು ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ.ಜಾತಿ/ಪ.ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಶೇ.50 ರಷ್ಟು ಮೀಸಲಾತಿಯನ್ನು ಜಾರಿಗೆ ತಂದವರು ಛತ್ರಪತಿ ಸಾಹು ಮಹಾರಾಜರು, 1902ರ ಜುಲೈ 26 ಅದನ್ನು ಜಾರಿಗೊಳಿಸಿದ ದಿನವಾಗಿರುವುದರಿಂದ ಆ ದಿನವನ್ನು ಬಹುಜನ ಸಮಾಜ ಪಕ್ಷ ಮೀಸಲಾತಿ ದಿನವನ್ನಾಗಿ ಆಚರಿಸುತ್ತಿದೆ ಎಂದರು.
ಸಾಹು ಮಹಾರಾಜರು ಮಹಿಳಾ ಮೀಸಲಾತಿ, ಮಹಿಳೆಯರಿಗೆ ಶಿಕ್ಷಣ, ವಿಧವೆಯರಿಗೆ ಮರುಮದುವೆ ಸೇರಿದಂತೆ ಅಸೃಷ್ಯರ ಪರವಾಗಿ ಅನೇಕ ಕ್ರಾಂತಿಕಾರಿ ನಿರ್ಣಯಗಳನ್ನು ತೆಗೆದುಕೊಂಡಿದ್ದರು, ಮೇಲ್ವರ್ಗದ ಜನರ ಪ್ರಬಲ ವಿರೋಧಕ್ಕೆ ಸೊಪ್ಪು ಹಾಕದೆ ಅವುಗಳನ್ನು ಜಾರಿಗೆ ತಂದಿದ್ದರು ಎಂದು ತಿಳಿಸಿದರು.
ಜನಮಾನಸದಲ್ಲಿ ಮರೆಯಾಗಿದ್ದ ಸಾಹು ಮಹಾರಾಜರು ಮತ್ತು ಅವರ ಚಿಂತನೆಗಳನ್ನು ಮೊದಲ ಬಾರಿಗೆ ಕಾನ್ಷೀರಾಂ ಸಾಹೇಬರು ಬೆಳಕಿಗೆ ತಂದರು ಹಾಗಾಗಿ ಸಾಹು ಮಹಾರಾಜರನ್ನು ಬಹುಜನ ಸಮಾಜಪಕ್ಷ ನಾಯಕನನ್ನಾಗಿ ಸ್ವೀಕರಿಸಿದೆ ಎಂದು ಹೇಳಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ್ ಮಾತನಾಡಿ ಸಮಾಜದ ವ್ಯವಸ್ಥೆಗೆ ಕನ್ನಡಿ ಹಿಡಿದವರು ಸಾಹು ಮಹಾರಾಜರು ಎಂದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಸಾಹು ಮಹಾರಾಜರ ಪ್ರಗತಿಪರ ಚಿಂತನೆಗಳನ್ನು ಎಲ್ಲಾ ವರ್ಗದವರೂ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಯಂತಿ ಪ್ರಯುಕ್ತ ಸಾಹು ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಬಿಎಸ್‍ಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಸಂತ, ಹುಣಸೆಮಕ್ಕಿ ಲಕ್ಷ್ಮಣ್, ಕೆ.ಎಸ್.ಮಂಜುಳಾ ಉಪಸ್ಥಿತರಿದ್ದರು.