ಚಿಕ್ಕಮಗಳೂರು : ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಇಂದು ಮತ್ತೆ 38 ಕೊರೊನಾ ಪ್ರಕರಣ ವರದಿಯಾಗಿವೆ.
ನಿನ್ನೆ 59 ವಿದ್ಯಾರ್ಥಿಗಳು ಹಾಗೂ 10 ಸಿಬ್ಬಂದಿ ಸೇರಿ ಒಟ್ಟು 69 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಇಂದು 35 ವಿದ್ಯಾರ್ಥಿಗಳು ಹಾಗೂ 3 ಸಿಬ್ಬಂದಿ ಸೇರಿ ಒಟ್ಟು 38 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ನಾಲ್ಕು ದಿನದಲ್ಲಿ ಒಂದೇ ವಸತಿ ಶಾಲೆಯಲ್ಲಿ 107 ಕೇಸ್ ಪತ್ತೆಯಾಗಿವೆ.
ಮೊದಲು ಶಿಕ್ಷಕರಿಗೊಬ್ಬರಿಗೆ ಕೊರೊನಾ ಕಾಣಿಸಿತ್ತು. ನಂತರ 418 ವಿದ್ಯಾರ್ಥಿಗಳು, ಸಿಬ್ಬಂದಿ ಸ್ವ್ಯಾಬ್ ಅನ್ನು ಆರೋಗ್ಯ ಇಲಾಖೆ ಪಡೆದಿತ್ತು. 418ರಲ್ಲಿ 107 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈಗಾಗಲೇ ಜಿಲ್ಲಾಡಳಿತ ಜವಾಹರ್ ನವೋದಯ ವಿದ್ಯಾಲಯವನ್ನ ಸೀಲ್ ಡೌನ್ ಮಾಡಿದೆ. ವಸತಿ ಶಾಲೆಯಲ್ಲಿಯೇ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.










