ಚಿಕ್ಕಮಗಳೂರು : ಜಿಲ್ಲಾ ಜಾನಪದ ಉತ್ಸವದ ಅಂಗವಾಗಿ ತಾಲ್ಲೂಕಿನ ಕೆ.ಬಿ.ಹಾಳ್‍ನಲ್ಲಿ ಜಾನಪದ ಪ್ರದರ್ಶನ…

262
firstsuddi

ಚಿಕ್ಕಮಗಳೂರು : ಜಿಲ್ಲಾ ಜಾನಪದ ಉತ್ಸವದ ಅಂಗವಾಗಿ ತಾಲ್ಲೂಕಿನ ಕೆ.ಬಿ.ಹಾಳ್‍ನಲ್ಲಿ ಭಾನುವಾರ ರಾತ್ರಿ ಕಲಾವಿದರಿಂದ ನಡೆದ ಜಾನಪದ ಪ್ರದರ್ಶನ ಗ್ರಾಮೀಣರ ಮನಸೂರೆಗೊಂಡಿತು.
ಅಂತರಾಷ್ಟ್ರೀಯ ಜಾನಪದ ಕಲಾವಿದ ಬೆಂಗಳೂರಿನ ಡಾ|| ಅಪ್ಪುಗೆರೆ ತಿಮ್ಮರಾಜು ಅವರ ಕಂಚಿನ ಕಂಠದ ಗಾಯನ, ಗ್ರಾಮದ ಮಹಿಳೆಯರಿಂದ ನಡೆದ ಕೋಲಾಟ, ಮೂಡಿಗೆರೆಯ ಹರಿಣಾಕ್ಷಿ ತಂಡದಿಂದ ಜರುಗಿದ ಸೋಬಾನೆ ಪದ, ಗೀಗೀ ಪದ, ಲಾವಣಿ ಗ್ರಾಮೀಣರನ್ನು ಮಧ್ಯರಾತ್ರಿಯವರೆಗೂ ಹಿಡಿದಿಟ್ಟವು.
ಹರಿಹರಪುರದ ಶಿವಶಂಕರ್ ಭಟ್ ಬಳಗದಿಂದ ನಡೆದ ಕುರುಕ್ಷೇತ್ರ ಯಕ್ಷಗಾನ, ಮಹಾಭಾರತದ ವೈಭವವನ್ನು ಅನಾವರಣಗೊಳಿಸಿದರೆ ಹಾಸನದ ಗುಂಡೂರಾವ್ ತಂಡದ ಬಯಲು ನಾಟಕ, ಗಾಯಕಿ ಜ್ಯೋತಿ ವಿನೀತ್‍ಕುಮಾರ್ ಅವರ ಗಾಯನ ಕೇಳುಗರ ಮನಸೂರೆಗೊಂಡಿತು.
ಕಾರ್ಯಕ್ರಮದುದ್ದಕ್ಕೂ ನಡೆದ ಜಾನಪದದ ವಿವಿಧ ಪ್ರಾಕಾರಗಳಾದ ಚೌಡಿಕೆ ಪದ, ಲಾವಣಿ, ಗೀಗೀಪದ, ಭಜನೆ, ಜಾನಪದ ನೃತ್ಯ, ಕೋಲಾಟ, ಗ್ರಾಮೀಣರ ಮನ ಗೆದ್ದವು.
ಇದಕ್ಕೂ ಮುನ್ನ ನಡೆದ ಜಾನಪದ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಸಾಹಿತಿ ಚಟ್ನಳ್ಳಿ ಮಹೇಶ್ ಅವರ ಪ್ರಾಸಬದ್ದ ಮಾತುಗಳು ಸಭಿಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಗಂಭೀರ ಚಿಂತನೆಗೂ ಹಚ್ಚಿದವು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಅವರ ಗಾಯನ ಗಮನ ಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಉತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕೆ.ಬಿ.ಹಾಳ್‍ನಲ್ಲಿ ಉತ್ಸವಕ್ಕೆ ದೊರೆತ ಪ್ರೋತ್ಸಾಹದಿಂದ ತಮ್ಮ ಹುಮ್ಮಸ್ಸು ಇಮ್ಮಡಿಯಾಗಿದ್ದು, ಮುಂದಿನ ದಿನಗಳಲ್ಲಿ ವಿಭಾಗ ಮತ್ತು ರಾಜ್ಯ ಮಟ್ಟದ ಜಾನಪದ ಉತ್ಸವವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಲಾ ಸೇವಾಸಂಘದ ಅಧ್ಯಕ್ಷ ಕೆ.ಮೋಹನ್, ಆದಿಚುಂಚನಗಿರಿ ವಿ.ವಿ ಯ ಕುಲಸಚಿವ ಡಾ|| ಸಿ.ಕೆ.ಸುಬ್ರಾಯ, ಸಾಹಿತಿ ಡಾ|| ಬೆಳವಾಡಿ ಮಂಜುನಾಥ್, ಜಾವಗಲ್ ಪ್ರಸನ್ನಕುಮಾರ್, ಸುಗಮ ಸಂಗೀತ ಗಂಗಾದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಹಿರಿಯ ಕಲಾವಿದ ಮಾಳೇನಹಳ್ಳಿ ಬಸಪ್ಪ, ವಾಸಂತಿ ಪದ್ಮನಾಭ್, ಉಪನ್ಯಾಸಕ ಜಿ.ಬಿ.ವಿರೂಪಾಕ್ಷ, ಗ್ರಾಮದ ಮುಖಂಡ ಕೆ.ಎಸ್.ಸತ್ಯಮೂರ್ತಿ ಉಪಸ್ಥಿತರಿದ್ದರು.