ಮುಂಬೈ : ತೂಕ ಇಳಿಸುವ ನಿಷೇಧಿತ ಮಾತ್ರೆಯನ್ನು ಸೇವಿಸಿ ಜಿಮ್ ಟ್ರೈನರ್, ಡ್ಯಾನ್ಸರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮೇಘನಾ ದೇವಗಡ್ಕರ್(22) ಮೃತ ದುದೈವಿ ಎಂದು ಗುರುತಿಸಲಾಗಿದ್ದು, ಮೇಘನಾ ಅವರು ವೃತ್ತಿಯಲ್ಲಿ ಜಿಮ್ ಟ್ರೈನರ್ ಹಾಗೂ ಡ್ಯಾನ್ಸರ್ ಆಗಿದ್ದು, ಇವರು ಎಂದಿನಂತೆ ನಿನ್ನೆ ಬೆಳಿಗ್ಗೆ ತಾನು ಜಿಮ್ ಟ್ರೈನರ್ ಆಗಿ ಸೇರಿದ್ದ ಜಿಮ್‍ಗೆ ತೆರಳಿ ವರ್ಕೌಟ್ ಆರಂಭಿಸುವ ಮೊದಲು ಆ ಮಾತ್ರೆಯನ್ನು ಸೇವಿಸಿದ್ದಾರೆ. ಮಾತ್ರೆಯನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ವಾಂತಿ ಮಾಡಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಜಿಮ್‍ನಲ್ಲಿದ್ದ ಕೆಲವರು ಆಕೆಯನ್ನು ಸ್ಥಳೀಯ ವೈದ್ಯೆರ ಬಳಿ ಕರೆದುಕೊಂಡು ಹೋಗಿದ್ದಾರೆ. ಮೇಘನಾ ಅವರನ್ನು ತಪಾಸಣೆ ನಡೆಸಿದ ವೈದ್ಯರು ಲೈಫ್‍ಲೈನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಇಲ್ಲಿ ಆಗುವುದಿಲ್ಲ ಎಂದು ಸಿಯಾನ್ ಆಸ್ಪತ್ರೆಗೆ ತೆರಳುವಂತೆ ಹೇಳಿದ್ದಾರೆ. ಸಿಯಾನ್ ಆಸ್ಪತ್ರೆಯ ವೈದ್ಯರು ಮೇಘನಾ ಅವರನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದು, ಆದರೆ ಸ್ವಲ್ಪ ಸಮಯದ ಬಳಿಕ ಅಧಿಕ ರಕ್ತದೊತ್ತಡದಿಂದಾಗಿ ಮೇಘನಾ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಸದ್ಯ ಈ ಕುರಿತು ನೌಪಾಡಾ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ನಿಷೇಧಿತ ಮಾತ್ರೆ ಅವರಿಗೆ ಹೇಗೆ ದೊರಕಿತು ಎಂಬುವುದನ್ನು ತನಿಖೆ ನಡೆಸುತ್ತಿದ್ದಾರೆ










