ಚಿಕ್ಕಮಗಳೂರು : ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಬಿಡುಗಡೆಗೊಳಿಸಿರುವ ಮೀಸಲಾತಿ ವಿಂಗಡಣೆ ಪಟ್ಟಿಯನ್ನು ಹಿಂಪಡೆಯುವಂತೆ ಒತ್ತಾಯ…

112
firstsuddi

ಚಿಕ್ಕಮಗಳೂರು : ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಡುಗಡೆಗೊಳಿಸಿರುವ ಮೀಸಲಾತಿ ವಿಂಗಡಣೆ ಪಟ್ಟಿಯನ್ನು ರಾಜ್ಯಸರ್ಕಾರ ಕೂಡಲೇ ಹಿಂಪಡೆಯ ಬೇಕು ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್ ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಡುಗಡೆಗೊಳಿಸಿರುವ ಮೀಸಲಾತಿ ವಿಂಗಡಣೆ ಪಟ್ಟಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಆಡಳಿತ ಪಕ್ಷದವರು ವೈಯಕ್ತಿಕ ಲಾಭಕ್ಕಾಗಿ ತಮ್ಮ ಮೂಗಿನ ನೇರಕ್ಕೆ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ಆರೋ ಪಿಸಿದ್ದಾರೆ.

ಮೀಸಲಾತಿ ವಿಂಗಡಣೆ ಪಟ್ಟಿಯಲ್ಲಿ ರಾಜಕೀಯ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಶೃಂಗೇರಿ ಭಾಗದಲ್ಲಿ ಅತಿಹೆಚ್ಚು ಪರಿಶಿಷ್ಟ ಪಂಗಡದವರಿದ್ದರೂ ಅವರಿಗೆ ಅವಕಾಶ ನೀಡಿಲ್ಲ. ವಸ್ತಾರೆ ಹಾಗೂ ಆಲ್ದೂರು ಜಿ.ಪಂ. ಮತ್ತು ತಾ.ಪಂ. ಮೀಸಲಾತಿ ಹಂಚಿಕೆಯಲ್ಲಿ ರಾಜಕೀಯ ತಾರತಮ್ಯ ಮಾಡಲಾಗಿದೆ ಎಂದು ದೂರಿದ್ದಾರೆ.

ಕಡೂರಿನ ಸಿಂಗಟಗೆರೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಆದ್ಯತೆ ನೀಡದೇ ಸಾಮಾನ್ಯ ವರ್ಗಕ್ಕೆ ಮಣೆ ಹಾಕಲಾಗಿದೆ. ಕಳಸಾಪುರ ತಾ.ಪಂ. ಮೀಸಲಾತಿಯಲ್ಲೂ ತಾರತಮ್ಯ ಎದ್ದು ಕಾಣುತ್ತಿದ್ದು ಒಟ್ಟಾರೆ ವಿರೋಧ ಪಕ್ಷದ ಪ್ರಭಾವಿಗಳು ಚುನಾವಣೆಗೆ ನಿಲ್ಲದಂತೆ ತಡೆಯುವ ಹುನ್ನಾರ ನಡೆಸ ಲಾಗಿದೆ ಎಂದು ಆರೋಪಿಸಿದ್ದಾರೆ.

ಆಡಳಿತ ಪಕ್ಷದವರು ತಾವೇ ಅಧಿಕಾರಕ್ಕೆ ಬರಬೇಕು ಎಂಬ ದುರಾಸೆಯಿಂದ ಸಿದ್ದಪಡಿಸಿರುವ ಮೀಸಲಾತಿ ವಿಂಗಡಣೆ ಪಟ್ಟಿಯನ್ನು ರಾಜ್ಯಸರ್ಕಾರ ಕೂಡಲೇ ಹಿಂಪಡೆದು ಹೊಸ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.