ಮೈಸೂರು : ಅಧಿಕಾರಕ್ಕಾಗಿ ಯಾರೂ ಪಕ್ಷಕ್ಕೆ ಬರಬಾರದು. ಜನಸೇವೆಯ ಗುರಿ ಇದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಪದೇ ಪದೇ ಪಕ್ಷಕ್ಕೆ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಘಟಕದಿಂದ ಏರ್ಪಡಿಸಿದ್ದ ಸಹಾಯ ಹಸ್ತ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಹೇಳುವುದೆಲ್ಲಾ ಸುಳ್ಳು. ಪ್ರಧಾನಿ ಅಚ್ಛೇ ದಿನ್ ಆಯೇಗಾ ಅಂದರೆ ಕೆಟ್ಟ ದಿನ ಬರುತ್ತಿದೆ ಅಂತಾ ಅರ್ಥ. ಬಿಜೆಪಿ ಎಂದರೆ ತಿಗಣೆ ಇದ್ದಂತೆ. ಜನರ ರಕ್ತ ಹೀರುವುದು ಅವರ ಕೆಲಸ. ಇಂತಹ ಕೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿರಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ಜೆಸಿಬಿಯಲ್ಲಿ ಅಗೆಯುತ್ತಾ ಹಣ ಮಾಡುತ್ತಿದ್ದಾರೆ. ಯಡಿಯೂರಪ್ಪನವರದು ಸ್ವಾತಂತ್ರ್ಯ ನಂತರದ ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಸರ್ಕಾರ. ಈ ರಾಜ್ಯವನ್ನು ಇವರು ಹಾಳು ಮಾಡುತ್ತಾರೆ. ಆದರೆ ಕಾಂಗ್ರೆಸ್ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ ಎಂದರು.
ಯಡಿಯೂರಪ್ಪ ಎರಡೇ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಸರ್ಕಾರ ಮುಂದುವರಿದರೆ ಎಷ್ಟು ಸಾಲ ಮಾಡಬಹುದು. ಇಂತಹ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದರು. ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.










