ಚಿಕ್ಕಮಗಳೂರು : ಜ್ಯೋತಿನಗರ ಬಡಾವಣೆಯ ಅಂಚೆ ಕಛೇರಿ ದಕ್ಷಿಣ ವಲಯದ ಅಂಚೆ ಕಛೇರಿಗಳ ಪೈಕಿ 3ನೇ ಸ್ಥಾನದಲ್ಲಿದೆ : ಬಿ.ಶಂಕರ.

164
firstsuddi

ಚಿಕ್ಕಮಗಳೂರು : ನಗರದ ಜ್ಯೋತಿನಗರ ಬಡಾವಣೆಯ ಅಂಚೆ ಕಛೇರಿ ಅತ್ಯುತ್ತಮ ಕಾರ್ಯ ನಿರ್ವಹಣೆಯಲ್ಲಿ ದಕ್ಷಿಣ ವಲಯದ ಅಂಚೆ ಕಛೇರಿಗಳ ಪೈಕಿ 3ನೇ ಸ್ಥಾನದಲ್ಲಿದೆ ಎಂದು ಅಂಚೆ ಅಧೀಕ್ಷಕ ಬಿ.ಶಂಕರ ಹೇಳಿದರು.
ನಗರದ ಜ್ಯೋತಿನಗರ ಬಡಾವಣೆಯ ಅಂಚೆ ಕಛೇರಿಯಲ್ಲಿ ನೂತನವಾಗಿ ತೆರೆಯಲಾದ ಕೇಂದ್ರ ಸರ್ಕಾರದ ಸಾಮಾನ್ಯ ಸೇವಾ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಎಲ್ಲಾ ಸೇವೆಗಳು ಒಂದೇ ಸ್ಥಳದಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ ವಿವಿಧ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಈ ಸಾಮಾನ್ಯ ಸೇವಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.
ಪೋನ್ ಬಿಲ್ ಕಟ್ಟಲು ಒಂದು ಕಡೆ, ಕರೆಂಟ್ ಬಿಲ್ ಕಟ್ಟಲು ಒಂದು ಕಡೆ, ಮೊಬೈಲ್ ರೀಚಾರ್ಜ್‍ಗೆ ಇನ್ನೊಂದು ಕಡೆ ಹೀಗೆ ಒದೊಂದು ಕೆಲಸಕ್ಕೆ ಒಂದೊಂದು ಕಛೇರಿಗೆ ಸಾರ್ವಜನಿಕರು ಅಲೆಯುತ್ತಿದ್ದಾರೆ, ಇದರಿಂದಾಗಿ ಅವರ ಸಮಯ ವ್ಯರ್ಥವಾಗುತ್ತಿದೆ ಅದನ್ನು ತಪ್ಪಿಸಲು ಈ ಕೇಂದ್ರ ಸಹಕಾರಿಯಾಗಿದೆ ಎಂದು ತಿಳಿಸಿದರು.
ನೂತನ ಕೇಂದ್ರದಲ್ಲಿ ಕರೆಂಟ್ ಬಿಲ್, ಪೋನ್ ಬಿಲ್, ಮೊಬೈಲ್ ರೀಚಾರ್ಜ್, ಡಿಟಿಹೆಚ್ ರೀಚಾರ್ಜ್, ಆಧಾರ್ ಸೇವೆ, ಪ್ಯಾನ್‍ಕಾರ್ಡ್, ಜನನ ಮರಣ ಪ್ರಮಾಣ ಪತ್ರ, ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ, ಜೀವ ವಿಮಾ ಕಂತು ಸಂಗ್ರಹಣೆ, ಮಾನಧನ, ಆರೋಗ್ಯ ಕಾರ್ಡ್, ಕೌಶಲ್ಯ ಸೇವೆ ಸೇರಿದಂತೆ ಅನೇಕ ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ಲಭಿಸಲಿವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಅಂಚೆ ಕಛೇರಿಗಳಲ್ಲೂ ಹಂತ ಹಂತವಾಗಿ ಸಾಮಾನ್ಯ ಸೇವಾ ಕೇಂದ್ರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಚಂದ್ರಶೇಖರ್, ಅಂಚೆ ಪಾಲಕರಾದ ಕೆ.ಆರ್.ಸುರೇಶ್, ಹೆಚ್.ಜಿ.ಆನಂದ್, ಅಂಚೆ ನಿರೀಕ್ಷಕ ಸಾಹೀಲ್ ಮಕೀಜ, ಮಾರಾಟ ಪ್ರತಿನಿಧಿ ಹೆಚ್.ಜೆ.ದೊಡ್ಡೇಶ್ ಉಪಸ್ಥಿತರಿದ್ದರು.